ಬೆಂಗಳೂರು: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಎಲ್ಲೆಡೆ ಮತ್ತು ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಯಿತು. ಭಟ್ಕಳದಲ್ಲಿ ರಾಜ್ಯದಲ್ಲಿಯೇ ಅಧಿಕ 14 ಸೆಂ.ಮೀ.ಮಳೆ ಸುರಿಯಿತು.
ಕಾವೇರಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿಯ ನೀರು ರಸ್ತೆಯನ್ನು ಆವರಿಸಲು ಕೆಲವು ಅಡಿಗಳಷ್ಟೇ ಬಾಕಿ ಇದೆ. ಅಲ್ಲಲ್ಲಿ ಲಘು ಪ್ರಮಾಣದಲ್ಲಿ ಧರೆಗಳು ಕುಸಿಯುತ್ತಲೇ ಇವೆ. ಸೋಮವಾರಪೇಟೆಯ ಹರದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೆಲ ಮನೆಗಳ ಗೋಡೆ ಕುಸಿದಿದೆ.
ಮಂಗಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕುಂಜತ್ತಬೈಲಿನಲ್ಲಿ ಮನೆ, ಬಿಜೈಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕಂಕನಾಡಿ ವೃತ್ತದ ಬಳಿ ಬೃಹತ್ ಆಲದ ಮರ ಉರುಳಿ ಬಿದ್ದು, ವಿದ್ಯಾರ್ಥಿನಿ ಸಹಿತ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಿದರು.
ಇದೇ ವೇಳೆ, ಫಳ್ನೀರ್, ಸುರತ್ಕಲ್‌ನಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆಯಾಯಿತು. ಪುತ್ತೂರು, ಸುಬ್ರಹ್ಮಣ್ಯ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ಕುಮಾರಧಾರಾ ಮತ್ತು ದರ್ಪಣ ತೀರ್ಥ ನದಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಸುಬ್ರಹ್ಮಣ್ಯದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಶೃಂಗೇರಿ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.
ಮುಂದುವರಿದ ತೆರವು ಕಾರ್ಯಾಚರಣೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ಮಣಿಬಂಡ ಎಂಬಲ್ಲಿ ಹಳಿಗೆ ಉರುಳಲು ಸಿದ್ಧಗೊಂಡ ಬಂಡೆಗಲ್ಲು ತೆರವು ಕಾರ್ಯಾಚರಣೆ ಸೋಮವಾರವೂ ನಡೆಯಿತು. ಒಂದೆಡೆ ತೆರವು ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಮತ್ತೆ ಬಂಡೆಯ ಛಿದ್ರ ಭಾಗಗಳು ಮತ್ತು ಮಣ್ಣು ಹಳಿಯ ಮೇಲೆ ಕುಸಿಯುತ್ತಿವೆ. ತೆರವು ಕಾರ್ಯ ಮುಗಿಸಲು ಇನ್ನೂ ಮೂರು ದಿನ ಹಿಡಿಯಬಹುದಾಗಿದ್ದು, ರೈಲು ಸಂಚಾರ ವಿಳಂಬವಾಗುವ ಸಾಧ್ಯತೆಯಿದೆ.