Advertisement
ಇಲ್ಲಿನ ಎಪಿಎಂಸಿಯಲ್ಲಿ ಗುರುವಾರ ಕ್ವಿಂಟಲ್‌ಗೆ 13,200 ರೂ. ಬೆಲೆಗೆ ಈರುಳ್ಳಿ ಮಾರಾಟವಾಗಿದೆ. ಕಳೆದ 6 ವರ್ಷಗಳ ಹಿಂದೆ 6,500 ರೂ. ದರಕ್ಕೆ ಮಾರಾಟವಾಗಿತ್ತು. ಅದೇ ಅತಿ ಹೆಚ್ಚಿನ ದರವಾಗಿತ್ತು. ಕಳೆದ ವರ್ಷ ಎಕರೆಗೆ 100 ಕ್ವಿಂಟಲ್ ಬೆಳೆದ ರೈತರಿಗೆ ಈ ಬಾರಿ ಕೇವಲ 50-60 ಕ್ವಿಂಟಲ್ ಬಂದಿದೆ. ಇನ್ನೂ ಕೆಲವೆಡೆ ಅಷ್ಟು ಕೂಡ ಬಂದಿಲ್ಲ. ಮತ್ತೆ ಕೆಲವೆಡೆ ನೆರೆ ಹೊಡೆತಕ್ಕೆ ಇಳುವರಿ ಸಂಪೂರ್ಣ ಕೈಕೊಟ್ಟಿರುವುದು ಬೆಲೆ ಗಗನಕ್ಕೇರುವಂತೆ ಮಾಡಿದೆ. ಚಿಕ್ಕ ಗಾತ್ರ ಈರುಳ್ಳಿಯನ್ನೂ ವರ್ತಕರು ಲೆಕ್ಕಿಸದೆ
ಖರೀದಿಸುತ್ತಿದ್ದಾರೆ. ಕಳೆದ ವರ್ಷದ ಗರಿಷ್ಠ ದರವೇ ಈ ವರ್ಷದ ಆರಂಭಿಕ ದರವಾಗಿದೆ. ಈಗಿನ ಮಾರುಕಟ್ಟೆ ದರದ ಪ್ರಕಾರ ಗರಿಷ್ಠ 13,200 ರೂ. ನಿಗದಿಯಾದರೆ, ಕನಿಷ್ಠ 2,000ಕ್ಕೆ ಮಾರಾಟವಾಗುತ್ತಿದೆ. ಉತ್ಪನ್ನ ಸರಿಯಾಗಿದ್ದಲ್ಲಿ 9,200 ರೂ. ದರ ಸಿಗುತ್ತಿದೆ. ಇಲ್ಲಿನ ಎಪಿಎಂಸಿಗೆ ನಿತ್ಯ 1,500ರಿಂದ 1,800 ಕ್ವಿಂಟಲ್ ಈರುಳ್ಳಿ ಆವಕವಾಗುತ್ತಿದೆ.
ಯಾದಗಿರಿಯಿಂದಲೂ ಸಾಕಷ್ಟು ರೈತರು ಈರುಳ್ಳಿ ಮಾರಾಟಕ್ಕೆ ತರುತ್ತಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗೆ ಅಷ್ಟೊಂದು ಉತ್ತೇಜನವಿಲ್ಲ. ಆದರೂ, ಉಭಯ ನದಿಗಳ ನೀರಿನ
ಮೂಲಗಳು, ಬೋರ್ ನೆರವಿನಿಂದ ಜಿಲ್ಲೆಯ ರೈತರು ಅಲ್ಲಲ್ಲಿ ಈರುಳ್ಳಿ ಬೆಳೆಯುತ್ತಾರೆ. ಉಪ ಬೆಳೆಯಾಗಿ
ಬೆಳೆಯುವ ಈರುಳ್ಳಿ ಒಮ್ಮೊಮ್ಮೆ ಕೈ ಹಿಡಿದರೆ ಬಹುತೇಕ ಬಾರಿ ಕೈ ಕೊಟ್ಟಿದ್ದೇ ಹೆಚ್ಚು. ಆದರೂ ಈಗಿನ ದರ ನೋಡಿದರೆ ಯಾವ ರೈತರಿಗೂ ಮೋಸವಿಲ್ಲ.
Related Articles
Advertisement
ರೈತರ ಜೇಬು ಭರ್ತಿ: ಹಿಂದಿನ ವರ್ಷ ಉತ್ತಮ ಇಳುವರಿ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ 3 ಸಾವಿರ ರೂ.ಗಿಂತ ಅಧಿಕ ಬೆಲೆಗೆ ಮಾರಾಟವಾಗಲೇ ಇಲ್ಲ. ಸಣ್ಣ ಹಿಡಿ ಇರುವ ಈರುಳ್ಳಿಯನ್ನಂತೂ ಕೇಳುವವರು ಇರಲಿಲ್ಲ. ಇದರಿಂದ ರೈತರು ಚೀಲ ಸಮೇತ ಈರುಳ್ಳಿಯನ್ನು ಎಪಿಎಂಸಿಯಲ್ಲಿ ಬಿಟ್ಟು ಹೋಗಿದ್ದರು. ಇನ್ನೂ ಕೆಲವೆಡೆ ಹೊಲದಲ್ಲಿಯೇ ಆಡು, ಕುರಿ, ದನಕರುಗಳನ್ನು ಬಿಟ್ಟು ಬೆಳೆಯನ್ನುಮೇಯಿಸಿದ್ದರು. ಆದರೆ, ಈ ಬಾರಿ ಮಾತ್ರ 10-20 ಪಾಕೆಟ್ ಈರುಳ್ಳಿ ಬೆಳೆದವರಿಗೂ ಜೇಬು ತುಂಬಿದೆ. ಇನ್ನು ನೂರಾರು ಕ್ವಿಂಟಲ್ ಬೆಳೆದ ರೈತರ ಆನಂದಕ್ಕೆ ಪಾರವೇ ಇಲ್ಲ. ಬೇಡಿಕೆ ಹೆಚ್ಚಾಗಿದ್ದು, ಈ ಮುಂಚೆ ನಡೆಸುವ ರೀತಿಯಲ್ಲೇ ವಹಿವಾಟು ನಡೆಸುತ್ತಿದ್ದೇವೆ. ಹಿಂದೆ ಖರೀದಿಸುತ್ತಿದ್ದ ವ್ಯಾಪಾರಿಗಳೇ ದುಬಾರಿ ಹಣ ನೀಡುತ್ತಿದ್ದಾರೆ. ಆಂಧ್ರ, ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಎಂದಿನಂತೆ ರವಾನೆಯಾಗುತ್ತಿದೆ. ಬೇಡಿಕೆ ಇದ್ದರೂ ಪೂರೈಸಲು ಈರುಳ್ಳಿಯೇ ಇಲ್ಲ.
ಪರಿಸ್ಥಿತಿ ಗಮನಿಸಿದರೆ ಈ ದರ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
● ಶಾಲಂ ಪಾಷಾ, ವರ್ತಕ, ಎಪಿಎಂಸಿ ರಾಯಚೂರು ● ಸಿದ್ದಯ್ಯಸ್ವಾಮಿ ಕುಕನೂರು