Advertisement

ರಾಜ್ಯದಲ್ಲಿ 1,316 ಶಾಲೆಗಳು ಅನಧಿಕೃತ: ಶಿಕ್ಷಣ ಇಲಾಖೆ 

09:46 PM Feb 14, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,316 ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಂಗ್ರಹಿಸಿದ್ದು, ಈ ಪೈಕಿ 871 ಶಾಲೆಗಳು ಬೆಂಗಳೂರಿನಲ್ಲೇ ಇವೆ.

Advertisement

ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ 95 ಶಾಲೆಗಳು, ಒಂದು ಮಾಧ್ಯಮಕ್ಕೆ ಅನುಮತಿ ಪಡೆದು ಇನ್ನೊಂದು ಮಾಧ್ಯಮದಲ್ಲಿ ಬೋಧಿಸುತ್ತಿರುವ 294 ಶಾಲೆಗಳು ಪತ್ತೆಯಾಗಿವೆ. ಅಲ್ಲದೆ ರಾಜ್ಯದಲ್ಲಿ ಅನುಮತಿ ಪಡೆಯದೇ 63 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು 74 ಶಾಲೆಗಳು ಅನಧಿಕೃತವಾಗಿ ಉನ್ನತೀಕರಿಸಿಕೊಂಡಿವೆ.

ಅನಧಿಕೃತ ಶಾಲೆಗಳಿಗೆ ನೋಟಿಸ್‌ ನೀಡಲಾಗಿದ್ದು ಈ ಶಾಲೆಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಆದಷ್ಟು ಶೀಘ್ರ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ 386 ಶಾಲೆಗಳು ಮತ್ತು ಬೆಂಗಳೂರು ಉತ್ತರದಲ್ಲಿ 485 ಅನಧಿಕೃತ ಶಾಲೆಗಳು ಪತ್ತೆಯಾಗಿದೆ. ರಾಜ್ಯದ ಒಟ್ಟು ಅನಧಿಕೃತ ಶಾಲೆಗಳಲ್ಲಿ ಶೇ. 66 ಬೆಂಗಳೂರಿನಲ್ಲೇ ಇದೆ. ಉಳಿದಂತೆ ತುಮಕೂರು 109, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 59, ಬೀದರ್‌ 50, ಕೋಲಾರ 32, ಚಿಕ್ಕಮಗಳೂರು 21, ಕಲಬುರಗಿ 17, ಧಾರವಾಡ 14, ಮಂಡ್ಯ ಜಿಲ್ಲೆಯಲ್ಲಿ 10 ಶಾಲೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

14 ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳೇ ಇಲ್ಲ
ದಕ್ಷಿಣ ಕನ್ನಡ, ಗದಗ, ಶಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೊಡಿ, ಬೆಳಗಾವಿ, ಕೊಡಗು, ಕೊಪ್ಪಳ, ಯಾದಗಿರಿ, ವಿಜಯನಗರ, ರಾಮನಗರ, ದಾವಣಗೆರೆ, ಶಿವಮೊಗ್ಗ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳು ಕಂಡು ಬಂದಿಲ್ಲ. ಉಳಿದಂತೆ ಉಡುಪಿ, ಹಾವೇರಿ ಮತ್ತು ಚಿತ್ರದುರ್ಗದಲ್ಲಿ ಒಂದೇ ಒಂದು ಅನಧಿಕೃತ ಶಾಲೆ ಪತ್ತೆಯಾಗಿದೆ. ಹಾಸನ 2, ರಾಯಚೂರು 4, ಚಾಮರಾಜನಗರ 5, ಮೈಸೂರು ಜಿಲ್ಲೆಯಲ್ಲಿ 7 ಅನಧಿಕೃತ ಶಾಲೆಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಅನಧಿಕೃತ ಶಾಲೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನಧಿಕೃತ ಶಾಲೆಗಳ ಅಂತಿಮ ಪಟ್ಟಿ ತಯರಾಗಿಲ್ಲ. ಅನಧಿಕೃತ ಶಾಲೆಗಳೆಂದು ಮೇಲ್ನೊಟಕ್ಕೆ ಕಂಡು ಬಂದಿರುವ ಶಾಲೆಗಳ ದಾಖಲೆಗಳ ಪರಿಶೀಲನೆ ನಡೆಸಬೇಕಿದೆ. ಶಾಲೆಗಳನ್ನು ಅನಧಿಕೃತವೆಂದು ಘೋಷಿಸುವುದು ಅತ್ಯಂತ ಸೂಕ್ಷ್ಮ ಸಂಗತಿಯಾಗಿದ್ದು ನಾವು ಅವಸರ ಮಾಡುವಂತಿಲ್ಲ. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುವ ಮೊದಲೇ ನಾವು ಅನಧಿಕೃತ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.
– ಆರ್‌. ವಿಶಾಲ್‌, ಶಿಕ್ಷಣ ಇಲಾಖೆಯ ಆಯುಕ್ತರು

ಶಿಕ್ಷಣ ಇಲಾಖೆ ಸರಿಯಾಗಿ ಗಮನಿಸಿದರೆ ಅನಧಿಕೃತ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಂಭವವಿದೆ. ಶಿಕ್ಷಣ ಇಲಾಖೆಯ ಆಯುಕ್ತರ ಆನುಮೋದಿತ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿಗಳನ್ನು ನೋಂದಾಣಿ ಮಾಡಿಕೊಂಡು ಬಂದಿದ್ದೇವೆ. ಆರ್‌ಟಿಇ ಅಡಿಯಲ್ಲಿ ಅಧಿಕೃತ ಶಾಲೆಯೆಂದು, ಪ್ರತಿ ವರ್ಷ ಆರ್‌ಟಿಇ ಆಡಿ ಸೀಟುಗಳನ್ನು ಘೋಷಿಸಿ ಈಗ ಅನಧಿಕೃತ ಶಾಲೆಯೆಂದು ಪ್ರಕಟಿಸಿರುವುದು ಸರಿಯಲ್ಲ.
ಡಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವ್ಯವಸ್ಥಾಪಕರ ಸಂಘಟನೆ

Advertisement

Udayavani is now on Telegram. Click here to join our channel and stay updated with the latest news.

Next