Advertisement

ಶಾಲೆಯಿಂದ ಹೊರಗುಳಿದ 1316 ಮಕ್ಕಳು

05:09 PM Dec 17, 2018 | |

ಬಾಗಲಕೋಟೆ: ಸರ್ವರಿಗೂ ಶಿಕ್ಷಣ ಎಂಬ ಕಟ್ಟುನಿಟ್ಟಿನ ನಿಯಮ ಅನುಷ್ಠಾನಗೊಂಡರೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲಾಗಿಲ್ಲ. ಜಿಲ್ಲೆಯಲ್ಲಿ 6ರಿಂದ 7 ವರ್ಷದ ಒಟ್ಟು ಮಕ್ಕಳಲ್ಲಿ ಇಂದಿಗೂ 1,316 ಮಕ್ಕಳು ಶಿಕ್ಷಣದಿಂದ ದೂರವೇ ಇದ್ದಾರೆ.

Advertisement

ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಅನ್ವಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದಿಂದ ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಈ ವೇಳೆ ಒಟ್ಟು 1,316 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ. ಈ ಸಂಖ್ಯೆ 2014-15ರಲ್ಲಿ 478 ಮಾತ್ರ ಇತ್ತು. 2018-19ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗಾಗಿ ಖಾಸಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ, ರಾಜ್ಯ ಸರ್ಕಾರದ ಎಸ್‌ಎಸ್‌ಎ ಅಡಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿಯೊಂದು ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ಕೈಗೊಂಡಿದ್ದು, ಈ ವೇಳೆ ಒಟ್ಟು 1,316 ಮಕ್ಕಳು ಬಾಗಲಕೋಟೆ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವಂತೆ ನಿರ್ದೇಶನ ನೀಡಲಾಗಿದೆ. ಈ ನಿರ್ದೇಶನದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಕ್ರಮ ಕೈಗೊಂಡಿದ್ದು, 1,254 ಮಕ್ಕಳನ್ನು ಮಾತ್ರ ಈ ಯೋಜನೆಯಡಿ ಅಳವಡಿಸಿಕೊಳ್ಳಲಾಗಿದೆ. ಇನ್ನುಳಿದ 62 ಮಕ್ಕಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಯಾವ ನಿಯಮ, ಸೌಲಭ್ಯ, ವಿಶೇಷ ಆದ್ಯತೆ ಹಾಗೂ ಯಾವ ಮಾದರಿ ಅನುಸರಿಸಿ, ಮುಖ್ಯ ವಾಹಿನಿಗೆ ತರಬೇಕು ಎಂಬುದರ ಕುರಿತು ರಾಜ್ಯಮಟ್ಟದಲ್ಲೇ ನಿರ್ದಿಷ್ಟ ನಿಯಮ ರೂಪಿಸಲಾಗುತ್ತಿದೆ.

ಶಾಲೆಗಳ ಕೊರತೆ ಇಲ್ಲ: ಜಿಲ್ಲೆಯಲ್ಲಿ 656 ಕಿರಿಯ ಪ್ರಾಥಮಿಕ, 1,132 ಹಿರಿಯ ಪ್ರಾಥಮಿಕ, 440 ಪ್ರೌಢಶಾಲೆಗಳಿವೆ. ಅವುಗಳಲ್ಲಿ ಮಕ್ಕಳ ಕೊರತೆ ಇರುವ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದು, ಯಾವುದೇ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುತ್ತಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಆ ಶಾಲೆಗಳಿಗೆ ಪುನಃ ಮಕ್ಕಳು ಬಂದರೆ, ಪುನಾರಂಭಿಸಲಾಗುತ್ತದೆ ಎಂದು ಡಿಡಿಪಿಐ ಎಂ.ಆರ್‌. ಕಾಮಾಕ್ಷಿ ತಿಳಿಸಿದ್ದಾರೆ.

ಶೇ.68.82 ಸಾಕ್ಷರತೆ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗಂಡು-ಶೇ.75.77, ಹೆಣ್ಣು-52.58 ಸೇರಿದಂತೆ ಒಟ್ಟು ಶೇ.64.20ರಷ್ಟು ಸಾಕ್ಷರತೆ ಪ್ರಮಾಣವಿದ್ದರೆ, ನಗರ ಪ್ರದೇಶದಲ್ಲಿ ಗಂಡು-ಶೇ.86.55, ಹೆಣ್ಣು-ಶೇ.70.65 ಸೇರಿ ಒಟ್ಟು ಶೇ.78.58ರಷ್ಟು ಸಾಕ್ಷರತೆ ಇದೆ. ಜಿಲ್ಲೆಯ ಒಟ್ಟಾರೆ ಸಾಕ್ಷರತೆ ಗಂಡು-ಶೇ.79.23, ಹೆಣ್ಣು-ಶೇ.58.40 ಸೇರಿ ಶೇ.68.82ರಷ್ಟು ಸಾಕ್ಷರತೆ ಪ್ರಮಾಣವಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದ್ದು, ಅದಕ್ಕಾಗಿ 6ರಿಂದ 7 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಎಸ್‌ ಎಸ್‌ಎ ಯೋಜನೆಯಡಿ ಜಿಲ್ಲೆಯ ಆರು ತಾಲೂಕಿಗೆ ತಲಾ ಒಂದರಂತೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಾಕ್ಷರತೆ ಹಾಗೂ ಶಿಕ್ಷಣದ ಕುರಿತು ಜಾಗೃತಿ, ಕಲಿಕೆಗೆ ಪ್ರೋತ್ಸಾಹ ನೀಡಲು ನಿರಂತರ ಕಾರ್ಯ ಕೈಗೊಂಡಿದೆ.

Advertisement

ಜಿಲ್ಲೆಯ ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡಿದ್ದು, 1,316 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಂಡು ಬಂದಿತ್ತು. ಅದರಲ್ಲಿ 1,254 ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಈಗಾಗಲೇ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ 32,443 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಅವರಿಗೆ ಪರಿಹಾರ ಬೋಧನೆಯಡಿ ಗುರುತಿಸಲಾಗಿದೆ. 
 ಎಂ.ಆರ್‌. ಕಾಮಾಕ್ಷಿ, ಡಿಡಿಪಿಐ

ವಲಸೆ ಕುಟುಂಬದ ಮಕ್ಕಳಿಗೆ ಶಿಕ್ಷಣದ ಅರಿವೇ ಇಲ್ಲ
ಜಿಲ್ಲೆಯ ಬಹುತೇಕ ಕಡೆ ಶಾಲೆಯ ಮುಖ ನೋಡದ ಮಕ್ಕಳಿದ್ದಾರೆ. ಬಾದಾಮಿ, ಹುನಗುಂದ, ಬಾಗಲಕೋಟೆ ತಾಲೂಕಿನ ಕೆಲ ಹಳ್ಳಿಗಳ ಜನರು ವರ್ಷದ ಆರು ತಿಂಗಳು ಗೋವಾ, ಮಂಗಳೂರು, ಮಹಾರಾಷ್ಟ್ರದತ್ತ ಗುಳೆ  ಹೋಗುತ್ತಾರೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು. ಹಾಗೆಯೇ ತಾಲೂಕಿನ ಗದ್ದನಕೇರಿ ಕ್ರಾಸ್‌ ಬಳಿ ವಲಸೆ ಕುಟುಂಬಗಳು ಕಳೆದ ನಾಲ್ಕು ತಿಂಗಳಿಂದ ಬೀಡು ಬಿಟ್ಟಿದ್ದು, ಇಲ್ಲಿ ಸುಮಾರು 10ರಿಂದ 15 ಮಕ್ಕಳು ನಿತ್ಯ ತಮ್ಮ ತಂದೆ-ತಾಯಿ ಜತೆಗೆ ಕೆಲಸದಲ್ಲಿ ತೊಡಗುತ್ತಾರೆ. ಹಿತ್ತಾಳೆಯ ಹಳೆಯ ಸಾಮಗ್ರಿ ಕರಗಿಸಿ ದೇವರ ಮೂರ್ತಿ ಮಾಡುವ ಕಾಯಕ ನಂಬಿರುವ ಈ ಕುಟುಂಬಗಳ ಮಕ್ಕಳೂ ಅದೇ ಕಾಯಕದಲ್ಲಿದ್ದಾರೆ. ಸಂವಿಧಾನದಲ್ಲಿ ಅಳವಡಿಸಿರುವ ಡಾ| ಅಂಬೇಡ್ಕರ್‌ ಅವರ ಮೂರ್ತಿಯನ್ನೇ ಈ ಮಕ್ಕಳು ತಯಾರಿಸಿ ಅದಕ್ಕೆ ಬಣ್ಣ ಲೇಪಣ ಮಾಡುವ ದೃಶ್ಯ ನಿತ್ಯ ಕಾಣಸಿಗುತ್ತದೆ.

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next