ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಎಣ್ಣೆಹೊಳೆಯಲ್ಲಿ ಎರಡು ದಿನಗಳ ಕಾಲ ನಡೆದ ಆಧಾರ್ ತಿದ್ದುಪಡಿ ಅಭಿಯಾನದಲ್ಲಿ ಬೃಹತ್ ಪ್ರಮಾಣದಲ್ಲಿ ತಿದ್ದುಪಡಿ ನಡೆದ ಅಭಿಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂಚೆ ಇಲಾಖೆ, ಮರ್ಣೆ ಗ್ರಾ.ಪಂ., ಗಣೇಶೋತ್ಸವ ಸಮಿತಿ ಎಣ್ಣೆಹೊಳೆ ಇದರ ಆಶ್ರಯದಲ್ಲಿ ನಡೆದ ತಿದ್ದುಪಡಿ ಕಾರ್ಯ ಕ್ರಮದಲ್ಲಿ ಪ್ರಥಮ ದಿನ 785 ಆಧಾರ್ ತಿದ್ದುಪಡಿ ನಡೆದರೆ 2ನೇ ದಿನ 529 ಆಧಾರ್ ತಿದ್ದುಪಡಿ ನಡೆದುದರಿಂದ ಸ್ಥಳೀಯರಿಗೆ ಬಹಳಷ್ಟು ಅನುಕೂಲವಾಗಿದೆ.
ಎರಡು ದಿನಗಳಲ್ಲಿ ಸುಮಾರು 1,314 ತಿದ್ದುಪಡಿಗಳು ನಡೆದಿದ್ದು ಸ್ಥಳೀಯ ಜನರಲ್ಲಿ ನೆಮ್ಮದಿಗೆ ಕಾರಣವಾಗಿದೆ. ಬ್ಯಾಂಕ್, ಅಂಚೆ ಕಚೇರಿ ಹಾಗೂ ಇತರ ಕೇಂದ್ರಗಳಲ್ಲಿ ಗರಿಷ್ಠ ಎಂದರೆ 50 ತಿದ್ದುಪಡಿ ನಡೆಯುತ್ತಿದ್ದು, ಪ್ರತಿದಿನ ಸಾವಿರಾರು ಮಂದಿ ಆಧಾರ್ ತಿದ್ದುಪಡಿಗಾಗಿ ಕಾಯಬೇಕಿತ್ತು. ಇದೀಗ ಗ್ರಾಮೀಣ ಭಾಗದ ಎಣ್ಣೆಹೊಳೆಯಲ್ಲಿ ಬೃಹತ್ ಅಭಿಯಾನ ನಡೆಯುವ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಸ್ಥಳೀಯರಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು ಯಶಸ್ವಿ ಅಭಿಯಾನ ನಡೆದಿದೆ.
ಈ ಹಿಂದೆ ದಿನವೊಂದರಲ್ಲಿ ಕುಂದಾಪುರದ ವಂಡ್ಸೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 577 ತಿದ್ದುಪಡಿ ನಡೆದಿದ್ದರೆ ಎಣ್ಣೆಹೊಳೆಯಲ್ಲಿ 785 ತಿದ್ದುಪಡಿ ನಡೆದಿದೆ. ರಾತ್ರಿ 11ರವರೆಗೂ ತಿದ್ದುಪಡಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಶೆಗೆ ಪಾತ್ರವಾಗಿದೆ.
ಈ ಸಂದರ್ಭ 100ಕ್ಕೂ ಅಧಿಕ ಅಂಚೆ ಖಾತೆಗಳನ್ನು ತೆರೆಯಲಾಗಿದ್ದು, ಕೇಂದ್ರ ಸರಕಾರ ಅಂಚೆ ಇಲಾಖೆ ಮೂಲಕ ವಿತರಿಸುವ ಗಂಗಾ ಜಲವನ್ನು ಸುಮಾರು 50 ಜನಕ್ಕೆ ವಿತರಿಸಲಾಗಿದೆ. ಅಲ್ಲದೇ ಸುಕನ್ಯಾ ಸಮೃದ್ಧಿ ವಿಮಾ ಯೋಜನೆಗಳು ದಾಖಲೆ ಪ್ರಮಾಣದಲ್ಲಿ ನಡೆದಿವೆ.
ಮರ್ಣೆ ಪಂಚಾಯತ್‌ನ ಸದಸ್ಯರಾದ ಜಿಲ್ಲೆಯಲ್ಲೇ ಅತಿ ಕಿರಿಯ ಗ್ರಾ.ಪಂ. ಸದಸ್ಯರಾಗಿರುವ ಗೌತಮ್ ನಾಯಕ್ ಅವರ ಮುತುವರ್ಜಿಯಲ್ಲಿ ನಡೆದ ಈ ತಿದ್ದುಪಡಿಯಲ್ಲಿ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಹಲವು ವರ್ಷಗಳಿಂದ ಇದ್ದ ಆಧಾರ್ ಸಮಸ್ಯೆಯನ್ನು ಪರಿಹರಿಸಿಕೊಂಡರು.
ಎಲ್ಲ ಕಡೆ ನಡೆಯಲಿ
ಅಂಚೆ ಇಲಾಖೆ, ಗಣೇಶೋತ್ಸವ ಸಮಿತಿ ಎಣ್ಣೆಹೊಳೆ ಹಾಗೂ ಮರ್ಣೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಆಧಾರ್ ತಿದ್ದುಪಡಿ ಅಭಿಯಾನ ನಡೆದಿದ್ದು, ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿಯೂ ನಡೆದರೆ ನಿರಂತರವಾಗಿ ಕಾಡುವ ಆಧಾರ್ ಸಮಸ್ಯೆಗೆ ಮುಕ್ತಿ ಕರುಣಿಸ ಬಹುದು.
-ಗೌತಮ್ ನಾಯಕ್,
ಆಧಾರ್ ತಿದ್ದುಪಡಿ ಸಂಯೋಜಕರು