Advertisement

ಹೆದ್ದಾರಿ ವಿಸ್ತರಣೆಗಾಗಿ ಕಟ್ಟಡ 130 ಅಡಿ ಸ್ಥಳಾಂತರ!

01:52 PM Jul 08, 2023 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಕೆಲವು ಕಡೆ ಮನೆ, ಕಟ್ಟಡ ನೆಲಸಮವಾಗುವುದು ಸಾಮಾನ್ಯ. ಆದರೆ ಹಳೆ ಕಟ್ಟಡವೊಂದನ್ನು ಸಂರಕ್ಷಿಸುವ ಉದ್ದೇಶದಿಂದ ಅದನ್ನು ಬರೋಬ್ಬರಿ 130 ಅಡಿಯಷ್ಟು ದೂರಕ್ಕೆ ರೈಲ್ವೇ ಮಾದರಿ ಹಳಿಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ!

Advertisement

ನೆರೆ ಹಾವಳಿ ಸಹಿತ ವಿವಿಧ ಕಾರಣದಿಂದ ಕರಾವಳಿಯಲ್ಲಿ ಕೆಲವು ಮನೆಗಳನ್ನು “ಲಿಫ್ಟ್‌’ ಮಾಡಿದ್ದನ್ನು ನೋಡಿದ್ದೇವೆ. ಆದರೆ ಇದೀಗ “ಲಿಫ್ಟ್‌’ ಮಾಡುವ ಬದಲು ಕೆಲವು ಅಡಿಗಳಷ್ಟು ದೂರಕ್ಕೆ ಕಟ್ಟಡವನ್ನೇ “ಶಿಫ್ಟ್‌’ ಮಾಡುವ ಕಾರ್ಯ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಸಮೀ ಪದ ಕೈಕಂಬದಲ್ಲಿ ನಡೆಯುತ್ತಿದೆ.

ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಕೈಕಂಬ ದಲ್ಲಿ ಹಲವು ಕಟ್ಟಡ, ಮನೆಯನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಇದರಂತೆ ಕೈಕಂಬದ “ರಾಮಚಂದ್ರ’ ಎಂಬ ಹೆಸರಿನ ಕಟ್ಟಡ ಕೂಡ ತೆರವಾಗಬೇಕಿತ್ತು. ಆದರೆ ಆ ಕಟ್ಟಡದ ಮೇಲಿನ ಪ್ರೀತಿ, ಗೌರವದಿಂದ ಅದನ್ನು ತೆರವು ಮಾಡುವ ಬದಲು ಸಮೀಪದ ಜಾಗಕ್ಕೆ ಸ್ಥಳಾಂತರ ಮಾಡಲು ಕಟ್ಟಡ ಮಾಲಕರು ಮನಸ್ಸು ಮಾಡಿದ್ದಾರೆ.

“ಉದಯವಾಣಿ ಸುದಿನ’ ಜತೆಗೆ ಮಾತನಾಡಿದ ಕಟ್ಟಡ ಮಾಲಕರಾದ ಜಿ. ರಾಜೇಶ್‌ ಪೈ, ಜಿ. ಅಶೋಕ್‌ ಪೈ ಅವರು “1999ರಲ್ಲಿ ನಿರ್ಮಾಣವಾದ ಕಟ್ಟಡವಿದು. ಸುಮಾರು 3 ಸಾವಿರ ಚದರ ಅಡಿಯಿದೆ. ಹೆದ್ದಾರಿ ವಿಸ್ತರಣೆಗೊಳ್ಳುವ ಕಾರಣಕ್ಕೆ ಈ ಕಟ್ಟಡವನ್ನು ತೆರವು ಮಾಡಬೇಕಿದೆ. ಆದರೆ ಹಳೆಯ ಕಟ್ಟಡವನ್ನು ತೆರವು ಮಾಡಲು ಮನಸ್ಸಿಲ್ಲ. ಹಾಗಾಗಿ ಕಟ್ಟಡವನ್ನೇ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಕಟ್ಟಡವನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ಇದರಲ್ಲಿ 2 ಬ್ಯಾಂಕ್‌, ಕೆಲವು ಅಂಗಡಿ ಇತ್ತು. ಅವರಿಗೆ ಹಳೆಯ ಕಟ್ಟಡದ ಹಿಂದೆ 2 ತಿಂಗಳುಗಳ ಹಿಂದೆ ಹೊಸ ಕಟ್ಟಡ ನಿರ್ಮಿಸಿ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಪಕ್ಕದ ಹಳೆಯ ಮನೆಯನ್ನು ಕೂಡ ಈಗಾಗಲೇ ತೆರವು ಮಾಡಲಾಗಿದೆ’ ಎನ್ನುತ್ತಾರೆ.

ವಾಮಂಜೂರಿನಲ್ಲಿ ಮನೆ ಶಿಪ್ಟ್!
ಕೇರಳ, ಬೆಂಗಳೂರಿನಲ್ಲಿ ಈಗಾಗಲೇ ಕೆಲವು ಮನೆಗಳನ್ನು ಸಂಪೂರ್ಣ ಸ್ಥಳಾಂತರ ಮಾಡಲಾಗಿದೆ.ಆದರೆ ಕರಾವಳಿಯಲ್ಲಿ 100 ಅಡಿಗಳಿಗಿಂತಲೂ ದೂರಕ್ಕೆ ಕಟ್ಟಡ ಸ್ಥಳಾಂತರ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಅಂದಹಾಗೆ, ಇದೇ ಹೆದ್ದಾರಿ ವಿಸ್ತರಣೆ ಕಾರಣ ದಿಂದ ವಾಮಂಜೂರುವಿನ ಪೆಟ್ರೋಲ್‌ ಪಂಪ್‌ ಸಮೀಪದ ಮನೆಯೊಂದನ್ನು ಸುಮಾರು 30 ಅಡಿಯಷ್ಟು ಸ್ಥಳಾಂತರ ಮಾಡಲಾಗಿದೆ. 2 ವಾರಗಳ ಹಿಂದೆಯಷ್ಟೇ ಈ ಕಾಮಗಾರಿ ಯಶಸ್ವಿಯಾಗಿ ನಡೆದಿದೆ.

Advertisement

ಕಟ್ಟಡ ಸ್ಥಳಾಂತರ ಹೇಗೆ?
ಹರಿಯಾಣ ಮೂಲದ ಕಂಪೆನಿ ಈ ಸ್ಥಳಾಂತರ ಕೆಲಸ ವಹಿಸಿಕೊಂಡಿದೆ. ಗೋಡೆಯ ನಾಲ್ಕೂ ಬದಿಯಲ್ಲಿ ಕೆಲವು ಅಡಿ ಆಳ ಅಗೆಯಲಾಗಿದೆ. ಅಲ್ಲಿ ಬೆಡ್‌, ಕಬ್ಬಿಣದ ರಾಡ್‌ ಅಳವಡಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸುಮಾರು 3 ವಾರಗಳಿಂದ ಕಾರ್ಮಿಕರು ಕೆಲಸ ನಡೆಸುತ್ತಿದ್ದಾರೆ. ಮಳೆ ಕಾರಣದಿಂದ ಕೆಲಸ ಸದ್ಯ ನಿಧಾನ. ಮುಂದಿನ 2 ವಾರಗಳೊಳಗೆ ಕಟ್ಟಡದ ಬದಿಯಲ್ಲಿ ಸುಸಜ್ಜಿತ ರೈಲ್ವೇ ಮಾದರಿ ಟ್ರಾÂಕ್‌ ನಿರ್ಮಿಸಲಾಗುತ್ತದೆ. ಬಳಿಕ ಕಟ್ಟಡವನ್ನು ಕೊಂಚ “ಲಿಫ್ಟ್‌’ ಮಾಡಿ ಗಾಲಿಗಳನ್ನು ಅಳವಡಿಸಿ ಸುಮಾರು 130 ಅಡಿ ದೂರಕ್ಕೆ ಕಟ್ಟಡವನ್ನು ಜಾರಿಸಿಕೊಂಡು ಹೋಗಿ ನೆಲೆಗೊಳಿಸುವುದು ಯೋಜನೆ.

ಮೊದಲಿಗೆ ಕಟ್ಟಡವನ್ನು ಟ್ರಾÂಕ್‌ನಲ್ಲಿ ಕೊಂಚ ಹಿಂಬದಿಗೆ ತಂದು ಬಳಿಕ ಎಡಭಾಗಕ್ಕೆ ಶಿಪ್ಟ್ ಮಾಡಲಾಗುತ್ತದೆ. ಒಂದು ದಿನದಲ್ಲಿ 5-10 ಅಡಿಯಂತೆ ಶಿಪ್ಟ್ ಮಾಡಲಾಗುತ್ತದೆ ಎನ್ನುತ್ತಾರೆ ಕಂಪೆನಿ ಕಾರ್ಮಿಕರು.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next