ಮಣಿಪಾಲ: ಜಿಲ್ಲಾ ವಾರ್ಷಿಕ ಸಾಲ ಯೋಜನೆಯಲ್ಲಿ ಶೇ.130.57ರಷ್ಟು ಸಾಧನೆ ಮಾಡ ಲಾಗಿದೆ. 2023-24ನೇ ಸಾಲಿನಲ್ಲಿ 13,877.95 ಕೋ.ರೂ. ಸಾಲ ನೀಡುವ ಗುರಿಹೊಂದಿದ್ದು 2023ರ ಡಿಸೆಂಬರ್ ಅಂತ್ಯಕ್ಕೆ 18,121.02 ಕೋ.ರೂ. ಸಾಲ ಒದಗಿಸಲಾಗಿದೆ.
ಜಿಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಶೀಬಾ ಸಹಜನ್ ಮಾಹಿತಿ ನೀಡಿ, ಕೃಷಿ, ಕೈಗಾರಿಕೆ, ಶಿಕ್ಷಣ, ವಸತಿ ಸಹಿತ ಆದ್ಯತಾ ವಲಯಕ್ಕೆ 10,812 ಕೋ.ರೂ. ಸಾಲ ನೀಡಲಾಗಿದೆ. ಆದ್ಯತೇತರ ವಲಯಕ್ಕೆ 7,308 ಕೋ.ರೂ. ಸಾಲ ನೀಡಿದ್ದೇವೆ. ದುರ್ಬಲ ವರ್ಗಕ್ಕೆ 2,660 ಕೋ.ರೂ. ಸಾಲ ವಿತರಿಸಲಾಗಿದೆ ಎಂದರು.
ಪಿ.ಎಂ.ಸ್ವನಿಧಿ ಯೋಜನೆಯಡಿ ಮೊದಲನೇ ಹಂತದಲ್ಲಿ 4,462 ಜನರಿಗೆ ಸಾಲ ವಿತರಿಸಿದ್ದು, ರಾಜಕ್ಯದಲ್ಲೇ ಜಿಲ್ಲೆಯ ಪ್ರಥಮ ಸ್ಥಾನ ಪಡೆದಿದೆ ಎಂದರಲ್ಲದೇ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕ್ ಸಾಲ ಠೇವಣಿ ಅನುಪಾತವು ಶೇ. 48.41ರಷ್ಟು ಬೆಳವಣಿಗೆಯಾಗಿ ಶೇ. 1.62 ರಷ್ಟು ಸಾಧನೆ ಮಾಡಲಾಗಿದೆ. ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕು. ಬ್ಯಾಂಕ್‌ಗಳಲ್ಲಿ 56,191 ಕೋ. ರೂ. ವ್ಯವಹಾರ ನಡೆದಿದ್ದು, ಸಾಲ ವಿತರಣೆಯಲ್ಲಿ 12.19ರಷ್ಟು ಬೆಳವಣಿಗೆಯಾಗಿದೆ ಎಂದರು.
ಜಿಪಂ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಕೈಗಾರಿಕೆ ಇಲಾಖೆಗಳಿಂದ ಶಿಫಾರಸು ಮಾಡಿದ ಅರ್ಜಿದಾರರಿಗೆ ಬ್ಯಾಂಕ್‌ಗಳು ಶೀಘ್ರವಾಗಿ ನೆರವು ಒದಗಿಸಬೇಕು ಎಂದು ಸೂಚಿಸಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಅಧಿಕಾರಿ ಮುರಳಿ ಮೋಹನ್ ಪಾಠಕ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಡಿಜಿಎಂ ನಿತ್ಯಾನಂದ ಶೇರಿಗಾರ್ ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ ಸ್ವಾಗತಿಸಿ, ನಿರೂಪಿಸಿದರು.