ಮುಂಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತದ ಯುವ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಸಂಭ್ರಮಕ್ಕೆ ಇಂದಿಗೆ 13 ವರ್ಷ ತುಂಬಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಓವರ್ ರೋಮಾಂಚನದಲ್ಲಿ ಗೆಲುವು ಸಾಧಿಸಿತ್ತು.
ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಗಳಿಸಿದ್ದು 157 ರನ್ ಗಳ ಸಾಧಾರಣ ಮೊತ್ತ. 75 ರನ್ ಗಳಿಸಿದ್ದ ಗೌತಮ್ ಗಂಭೀರ್ ಅವರದ್ದೇ ಗರಿಷ್ಠ ಗಳಿಕೆ.
ಇದನ್ನೂ ಓದಿ: ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ
ಗುರಿ ಬೆನ್ನತ್ತಿದ್ದ ಪಾಕಿಸ್ಥಾನ ಸತತ ವಿಕೆಟ್ ಕಳೆದುಕೊಂಡಿತ್ತು, ಆದರೆ ಒಂದೆಡೆ ಭದ್ರವಾಗಿ ನಿಂತಿದ್ದ ಮಿಸ್ಬಾ ಉಲ್ ಹಕ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಕೊನೆಯ ಓವರ್ ಗೆ ಒಂದು ವಿಕೆಟ್ ಸಹಾಯದಿಂದ 13 ರನ್ ಪಡೆಯುವ ಸವಾಲು ಪಾಕ್ ಮುಂದಿತ್ತು. ಅನುಭವಿ ಬೌಲರ್ ಹರ್ಭಜನ್ ಬದಲು ಜೋಗಿಂದರ್ ಶರ್ಮಾಗೆ ಬಾಲ್ ನೀಡಿದ ಧೋನಿ ಮ್ಯಾಜಿಕ್ ಮಾಡಿದ್ದರು. ಆರಂಭದಲ್ಲೇ ಸಿಕ್ಸರ್ ಬಾರಿಸಿದರೂ, ಮೂರನೇ ಎಸೆತವನ್ನು ಸ್ಕೂಪ್ ಮಾಡಲು ಹೋದ ಮಿಸ್ಬಾ ಶ್ರೀಶಾಂತ್ ಕೈಗೆ ಕ್ಯಾಚ್ ನೀಡಿದ್ದರು. ಇದರೊಂದಿಗೆ ಭಾರತ ಐದು ರನ್ ಅಂತರದಿಂದ ಗೆಲುವು ಸಾಧಿಸಿತ್ತು.
ಫೈನಲ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದ ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠರಾದರೆ, ಪಾಕಿಸ್ಥಾನದ ಶಾಹೀದ್ ಅಫ್ರಿದಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.