ಆಲೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ (ಹಾಸನದಿಂದ ಮಾರನಹಳ್ಳಿವರೆಗೆ) ಕಾಮಗಾರಿ ನಡೆಯುತ್ತಿದ್ದು, ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹೆದ್ದಾರಿ ಅಂಚಿನಲ್ಲಿರುವ ಭೈರಾಪುರ ಗ್ರಾಮದ ಸುಮಾರು 13 ಮನೆಗಳು ಕುಸಿಯುವ ಹಂತ ತಲುಪಿದ್ದು, ನಿವಾಸಿಗಳು ಭಯದಿಂದ ಬದುಕು ಸಾಗಿಸುವಂತಾಗಿದೆ.
ಸ್ಥಳೀಯ ನಿವಾಸಿಗಳಾದ ಟೈಲರ್ ವೆಂಕಟೇಶ್, ಮಂಜುನಾಥ, ಸರಸ್ವತಿ ಕೃಷ್ಣೇಗೌಡ, ಲಕ್ಷ್ಮಮ್ಮ ರುದ್ರೇ ಗೌಡ, ಆನಂದಚಾರ್, ಪರಮೇಶ್, ಮಂಜುನಾಥ, ಎಂ.ಬಾಲಕೃಷ್ಣ, ಅಪ್ಪಾಜಿಗೌಡ, ಶ್ರೀನಿವಾಸಕ, ಬಿ.ಕೆ. ಗಿರೀಶ್, ಶಶಿಕಲಾ ಎಂ.ಎಲ್.ಧೀರೇಶ್ ಅವರಿಗೆ ಸೇರಿದ ಮನೆಗಳು ಕುಸಿಯುವ ಹಂತಕ್ಕೆ ಸಿಲುಕಿದ್ದು, ನಿವಾಸಿಗಳು ಮನೆ ಮುಂಭಾಗದಲ್ಲಿ ತಿರುಗಾಡಲು ಸಹ ಜಾಗವಿಲ್ಲವಾಗಿದೆ.
22 ಅಡಿ ಆಳದಲ್ಲಿ ರಸ್ತೆ: ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡುವ ಮೊದಲು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮಾನಾಂತರದಲ್ಲಿ ಇಕ್ಕೆಲಗಳಲ್ಲಿ ಅಂಗಡಿ ಮತ್ತು ವಾಸದ ಮನೆಗಳಿದ್ದವು. ಈಗ ಸುಮಾರು 22 ಅಡಿ ಆಳದಲ್ಲಿ ರಸ್ತೆ ಹಾದು ಹೋಗಿರುವುದರಿಂದ ರಸ್ತೆಗೆ ಮಣ್ಣು ಕುಸಿಯುವುದು ಸಾಮಾನ್ಯ. ಆದರೆ, ಸುಮಾರು ಎಂಟು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸದೇ, ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾನವನ ಆಸ್ತಿ ಮತ್ತು ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈವರೆಗೂ ವಾಡಿಕೆ ಮಳೆಯಾಗದ್ದರಿಂದ ಮಣ್ಣು ಕುಸಿತ ಕಂಡಿರಲಿಲ್ಲ. ಭಾನುವಾರ ರಾತ್ರಿ ಮಳೆ ಎಡಬಿಡದೆ ಸುರಿದಿದ್ದರಿಂದ ಮಣ್ಣು ಕುಸಿಯಲಾರಂಭಿಸಿದೆ. ಮತ್ತೂಮ್ಮೆ ಭಾರೀ ಮಳೆಯಾದರೆ ಪ್ರತಿ ಅಂಗಡಿ, ಮನೆಗಳು ನೆಲಸಮವಾಗಲಿವೆ ಎಂಬ ಭೀತಿ ನಿವಾಸಿಗಳಲ್ಲಿ ಶುರುವಾಗಿದೆ.
ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕಾಮಗಾರಿಯಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿ¨ªಾರೆ. ಹಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಮತ್ತು ಇಲಾಖೆ ಅಧಿಕಾರಿಗಳಿಗೆ ಕಾಮಗಾರಿಯಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಿಂಗಾರು ಮಳೆಯಾಗುವ ಮುನ್ಸೂಚನೆ ಇದೆ, ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಹೆದ್ದಾರಿ ಅಂಚಿನಲ್ಲಿರುವ ಮನೆಗಳ ಸಮೀಪದವರಿಗೆ ಮಣ್ಣು ಕುಸಿಯುತ್ತಿದೆ. ಬೈರಾಪುರ ಜನರು ಆತಂಕದಲ್ಲಿ ಜೀವನ ದೂಡುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಇಲಾಖೆ ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಎಚ್ಚರಿಕೆ ನೀಡಿದ್ದಾರೆ. ನಾಲ್ಕೈದು ವರ್ಷಗಳಿಂದ ಒಂದಲ್ಲೊಂದು ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸುಮಾರು ನಾಲ್ಕೈದು ವರ್ಷಗಳಿಂದ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳಿಂದ ಒಂದಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ.
ನಮ್ಮ ಬದುಕನ್ನೇ ಕಿತ್ತುಕೊಂಡಿದ್ದಾರೆ. ವರ್ಷದಲ್ಲಿ ಮಳೆ ಕಡಿಮೆ ಇರುವುದರಿಂದ ನಮ್ಮ ಮನೆಗಳು ಉಳಿದಿವೆ. ಕಳೆದ ವರ್ಷದ ರೀತಿ ಮಳೆ ಬಂದಿದ್ದರೆ ಕುಟುಂಬ ಬೀದಿಯಲ್ಲಿ ನಿಲ್ಲಬೇಕಾಗಿತ್ತು. ಕಾಮಗಾರಿ ಮುಗಿಯುವವರೆಗೂ ಮಳೆ ಬರದಿದ್ದರೆ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಅಂಗಡಿ ಮಾಲೀಕ ವೆಂಕಟೇಗೌಡ ನೋವು ತೋಡಿಕೊಂಡರು.
ನಾಲ್ಕು ವರ್ಷಗಳ ಹಿಂದೆ ಮುಖ್ಯ ರಸ್ತೆ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿ ಸಿಮೆಂಟ್ ಸ್ಲ್ಯಾಬ್ ಅಳವಡಿಸಲಾಗಿತ್ತು. ಸ್ಲಾéಬ್ ಅಳವಡಿಕೆಯಲ್ಲಿ ತಾಂತ್ರಿಕ ತೊಂದರೆ ಎದುರಾಗಿ ನಂತರದಲ್ಲಿ ಮೂರು ಬಾರಿ ಸ್ಲ್ಯಾಬ್ ಅಳವಡಿಸಿದರೂ ತಾಂತ್ರಿಕ ತೊಂದರೆ ನಿವಾರಣೆಯಾಗಲಿಲ್ಲ. ಈಗ ಮನೆಗಳ ತಳಪಾಯದವರೆಗೂ ಮಣ್ಣು ಕುಸಿದಿದೆ.
-ಕೃಷ್ಣೇಗೌಡ, ಸ್ಥಳೀಯ ನಿವಾಸಿ, ಭೈರಾಪುರ
ಮೊದಲು ಮಣ್ಣು ಹೊರ ತೆಗೆದು ಸ್ಲ್ಯಾಬ್ ಅಳವಡಿಸಿ ನಂತರ ಹೊರ ಭಾಗದಿಂದ ಮಣ್ಣು ತುಂಬಬೇಕು. ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿಸುತ್ತೇವೆ. ಜನರಲ್ಲಿ ಭಯ, ಆತಂಕ ಬೇಡ.
-ಶೇಖರ್, ಉಪ ವ್ಯವಸ್ಥಾಪಕ ನಿರ್ದೇಶಕರು, ರಾ.ಹೆ. ಪ್ರಾಧಿಕಾರ
-ಟಿ.ಕೆ.ಕುಮಾರಸ್ವಾಮಿ ಆಲೂರು