Advertisement

13 ಅಡಿ ನೀರು ಶೇಖರಣೆ, ಕೆಲವು ದಿನಗಳಲ್ಲಿ ನೀರು ಸರಬರಾಜು

05:30 PM Feb 09, 2022 | Team Udayavani |

ಅಜೆಕಾರು: ಎಣ್ಣೆಹೊಳೆಯ ಸುವರ್ಣ ನದಿಯಲ್ಲಿ ಸುಮಾರು 108 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್‌ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಬಹುತೇಕ ಅಂತಿಮ ಹಂತದಲ್ಲಿದ್ದು ಅಣೆಕಟ್ಟಿಗೆ ಗೇಟ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.

Advertisement

ಗೇಟ್‌ ಅಳವಡಿಕೆ ಬಳಿಕ ಈಗ ಸುಮಾರು 13 ಅಡಿಗಳಷ್ಟು ನೀರು ಶೇಖರಣೆಗೊಂಡಿದ್ದು ಒಂದೆರಡು ದಿನಗಳಲ್ಲಿ ಸುಮಾರು 15 ಅಡಿಗಳಷ್ಟು ನೀರು ಶೇಖರಣೆಗೊಳ್ಳವ ನಿರೀಕ್ಷೆ ಇದೆ. ಸುವರ್ಣಾ ನದಿಗೆ ತಡೆಯಾಗಿ ನಿರ್ಮಾಣವಾದ ಅಣೆಕಟ್ಟಿಗೆ 15 ಅಡಿ ಎತ್ತರದ 19 ಗೇಟ್‌ ಅಳವಡಿಸಲಾಗಿದೆ.ಅಂತರ್ಜಲ ವೃದ್ಧಿಸುವ ಉದ್ದೇಶದೊಂದಿಗೆ ಕೃಷಿಗೆ ನೀರು ಒದಗಿಸುವ ಯೋಜನೆ ಹೊಂದಲಾಗಿದೆ.

ಕಾರ್ಕಳ ಪುರಸಭೆ, ಮರ್ಣೆ ಗ್ರಾಮ ಪಂಚಾಯತ್‌, ಹಿರ್ಗಾನ ಗ್ರಾಮ ಪಂಚಾಯತ್‌, ಕುಕ್ಕುಂದೂರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹಳ್ಳ ತೊರೆಗಳಿಗೆ ನೀರು ಹಾಯಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಸುಮಾರು 35 ಚೆಕ್‌ ಡ್ಯಾಂ ನಿರ್ಮಾಣ ಮಾಡಲಾಗಿದ್ದು ಇನ್ನು 10 ಚೆಕ್‌ ಡ್ಯಾಂಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಅಜೆಕಾರು, ಹಿರ್ಗಾನ ಭಾಗಗಳಲ್ಲಿ ಪೈಪ್‌ ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಪೈಪ್‌ ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ.

2020ರ ಫೆಬ್ರವರಿಯಲ್ಲಿ ಪ್ರಾರಂಭಗೊಂಡ ಏತ ನೀರಾವರಿ ಕಾಮಗಾರಿ ಈಗ ಅಂತಿಮ ಹಂತದಲ್ಲಿದ್ದು ಪ್ರಸಕ್ತ ವರ್ಷ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಿ ಸಾಧಕ ಬಾಧಕಗಳನ್ನು ತಿಳಿದು ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪೈಪ್‌ ಲೈನ್‌ ಅವಾಂತರ
ನೀರಾವರಿ ಯೋಜನೆಯ ಪೈಪ್‌ ಲೈನ್‌ ನಡೆದ ಕೆಲವೆಡೆ ಕಾಮಗಾರಿ ಅಸಮರ್ಪಕವಾಗಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಜೆಕಾರು ಪೇಟೆ ಭಾಗದಲ್ಲಿ ಪೈಪ್‌ಲೈನ್‌ಗಾಗಿ ರಸ್ತೆ, ಚರಂಡಿಗಳನ್ನು ಅಗೆಯಲಾಗಿದ್ದು. ಅದನ್ನು ಸಮರ್ಪಕವಾಗಿ ಮುಚ್ಚದೆ ಸಾರ್ವಜನಿಕ ಸಂಚಾರಕ್ಕೆ, ವ್ಯಾಪಾರಿಗಳಿಗೆ ಭಾರೀ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು ತ್ವರಿತವಾಗಿ ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯರಲ್ಲಿ ಆತಂಕ
ಏತ ನೀರಾವರಿ ಯೋಜನೆ ಪ್ರಾರಂಭದ ಹಂತದಿಂದಲೂ ಎಣ್ಣೆಹೋಳೆ ಭಾಗದ ಜನತೆ ಆತಂಕದಲ್ಲಿದ್ದು ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದರೂ ಆತಂಕ ಕಡಿಮೆಯಾಗಿಲ್ಲ. ಸ್ಥಳೀಯರಿಗೆ ಈ ಕಾಮಗಾರಿ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನೀಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ಸುವರ್ಣಾ ನದಿ ಉಕ್ಕಿ ಹರಿಯುವುದರಿಂದ ಈಗ ನದಿಯಲ್ಲಿ ಅಣೆಕಟ್ಟು ನಿರ್ಮಾಣವಾದ ಪರಿಣಾಮ ನದಿ ನೀರು ಇನ್ನಷ್ಟು ಕೃಷಿ ಭೂಮಿಗೆ, ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಲಿದೆಯೇ ಎಂಬ ಭಯ ಸ್ಥಳೀಯರನ್ನು ಕಾಡುತ್ತಿದೆ.

ಕಾಮಗಾರಿ ಪೂರ್ಣ
ಎಣ್ಣೆಹೊಳೆ ಏತ ನೀರಾವರಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದ್ದು ಗೇಟ್‌ ಅಳವಡಿಕೆ ಮಾಡಲಾಗಿದೆ. ಮುಂದಿನ 10 ದಿನಗಳಲ್ಲಿ ಪ್ರಾಯೋಗಿಕವಾಗಿ ಅಜೆಕಾರು ಭಾಗಕ್ಕೆ ನೀರು ಹಾಯಿಸಲಾಗುತ್ತದೆ.
– ಚಿರಂಜೀವಿ, ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next