ಧಾರವಾಡ: ನಗರದ ಪುರಾತನ ಕೆರೆಗಳಲ್ಲಿ ಒಂದಾಗಿರುವ ಕೋಳಿಕೆರೆಯನ್ನು ಅಭಿವೃದ್ಧಿಗೆ ಸುಮಾರು 13 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 9 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಇಲ್ಲಿನ ಹೊಸಯಲ್ಲಾಪುರದ ಕೋಳಿಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಸಾರ್ವಜನಿಕರ ಕುಂದು-ಕೊರತೆ ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೆರೆಯ ಒಡ್ಡು ನಿರ್ಮಾಣ, ಚರಂಡಿ ನೀರನ್ನು ಪ್ರತ್ಯೇಕಗೊಳಿಸುವುದು. 4 ಅಡಿ ಆಳದವರೆಗೆ ಹೂಳು ತೆಗೆಯುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೆತ್ತಿಕೊಂಡು ಕೋಳಿಕೆರೆಯನ್ನು ಕೆಲಗೇರಿ, ಉಣಕಲ್ ಕೆರೆಗಳ ಮಾದರಿಯಲ್ಲಿ ವಿಹಾರ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಧಾರವಾಡ ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 100 ಕೋಟಿ ರೂ.ಅನುದಾನ ನೀಡಿದ್ದು,ಅದರಲ್ಲಿ ಧಾರವಾಡ-71 ವಿಧಾನಸಭಾ ಕ್ಷೇತ್ರಕ್ಕೆ 21 ಕೋಟಿ ರೂ. ಅನುದಾನ ದೊರೆತಿದೆ. ಈ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಧಿಕಾರಿಗಳು ಒತ್ತು ನೀಡಬೇಕು.
ಈಗಾಗಲೇ ತಾವು ಪ್ರತಿನಿಧಿಸುವ ಧಾರವಾಡ 71 ವಿಧಾನಸಭಾ ಕ್ಷೇತ್ರದಲ್ಲಿ ಶೇ.80 ರಷ್ಟು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಹುಬ್ಬಳ್ಳಿ-ಧಾರವಾಡ ಬಿಆರ್ ಟಿಎಸ್ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದುದರಿಂದ ಬದಲಾಯಿಸಬೇಕಾಯಿತು.
ರಸ್ತೆಯಲ್ಲಿನ ಕೇಬಲ್‌ಗಳು, ಕೊಳವೆ ಮಾರ್ಗಗಳಿಂದಾಗಿ ಕಾಮಗಾರಿ ವಿಳಂಬವಾಗಿದ್ದು, ಈಗ ಹೊಸ ಗುತ್ತಿಗೆದಾರರು ಕಾಮಗಾರಿ ಚುರುಕುಗೊಳಿಸಿದ್ದಾರೆ ಎಂದರು. ಕೋಳಿಕೆರೆ ಪ್ರದೇಶದ ನಿವಾಸಿಗಳು ಸಚಿವರನ್ನು ಖುದ್ದಾಗಿ ಭೇಟಿಯಾಗಿ ತಮ್ಮ ಕುಂದು-ಕೊರತೆಗಳನ್ನು ವಿವರಿಸಿದರು.
ನಂತರ ಸಚಿವರು ವಾರ್ಡ್ ನಂಬರ್ 9ರಲ್ಲಿನ ಚರಂತಿಮಠ ಗಾರ್ಡನ್, ವಾರ್ಡ್ ನಂಬರ್ 8ರಲ್ಲಿನ ದುರ್ಗಾ ಕಾಲೋನಿ, ಹೆಬ್ಬಳ್ಳಿ ಅಗಸಿ, ಡಿಪೋ ಸರ್ಕಲ್ , ಮದಿಹಾಳ, ವಾರ್ಡ್ ನಂಬರ್ 7ರ ಗೊಲ್ಲರ ಕಾಲೋನಿಯ, ವಾರ್ಡ್ ನಂಬರ್ 5ರ ಕಮಲಾಪುರ ಓಣಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು-ಕೊರತೆ, ಅಹವಾಲು ಆಲಿಸಿದರು.
ವಿವಿಧ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಅಧಿಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಸದಸ್ಯ ಆನಂದ ಸಿಂಗನಾಥ, ವಾ.ಕ.ರ.ಸಾ. ಸಂ.ನಿರ್ದೇಶಕ ಮನೋಜ ಕರ್ಜಗಿ, ಪ್ರಶಾಂತ ಕೇಕರೆ, ಆನಂದ ಜಾಧವ, ಪ್ರಕಾಶ ಘಾಟಗೆ, ಅಜ್ಜಪ್ಪ ಗುಲಾಲದವರ ಮತ್ತಿತರರು ಇದ್ದರು.