Advertisement

ಕಡಲೆಕಾಳು ಖರೀದಿಗೆ 13 ಕೇಂದ್ರ ಸ್ಥಾಪನೆ

10:56 AM Feb 19, 2020 | Team Udayavani |

ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ 4,875 ರೂ. ದರದಲ್ಲಿ ಜಿಲ್ಲೆಯ ರೈತರಿಂದ ಖರೀದಿಸಲು ಸರ್ಕಾರದಿಂದ ಜಿಲ್ಲಾದ್ಯಂತ 13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿ ಅಧ್ಯಕ್ಷರಾದ ಡಿಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಡಲೆಕಾಳು ಖರೀದಿಸಲು ಆಧಾರ ಗುರುತಿನ ಚೀಟಿಯ ಮೂಲಪ್ರತಿ ಹಾಗೂ ನಕಲು ಪ್ರತಿ, 2019-20ನೇ ಸಾಲಿನ ಪಹಣಿ ಪತ್ರ ಮತ್ತು ಪಹಣಿ ಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು. ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಕಡಲೆಕಾಳು ಬೆಳೆದ ಬಗ್ಗೆ ದೃಢೀಕರಣ ಪತ್ರ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್‌ ಖಾತೆ ಪಾಸ್‌ ಪುಸ್ತಕದ ನಕಲು ಪ್ರತಿ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಡಲೆಕಾಳು ಚೆನ್ನಾಗಿ ಒಣಗಿರಬೇಕು. ತೇವಾಂಶ ಶೇ.12ಕ್ಕಿಂತ ಕಡಿಮೆ ಇರಬೇಕು. ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವತ್ಛವಾಗಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಲ್‌ ಹಾಗೂ ಗರಿಷ್ಟ 10 ಕ್ವಿಂಟಲ್‌ ಕಡಲೆಕಾಳನ್ನು ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕಡಲೆಕಾಳು ಉತ್ಪನ್ನ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ:8722726875 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next