ಹೊಸದಿಲ್ಲಿ: ಕೆಲದಿನಗಳ ಹಿಂದಷ್ಟೇ ಕೇಂದ್ರ ಸರಕಾರ ಅಕ್ರಮ ಹಣ ವರ್ಗಾವಣೆ ನಡೆಸಿದ್ದಕ್ಕೆ ನಕಲಿ ಕಂಪೆನಿಗಳ 2 ಲಕ್ಷಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿತ್ತು. ಈ ಪೈಕಿ ಕೆಲವೊಂದು ಕಂಪೆನಿಗಳು 2 ಸಾವಿರಕ್ಕಿಂತಲೂ ಅಧಿಕ ಖಾತೆಗಳನ್ನು ಹೊಂದಿದ್ದು, 2016ರ ನ.8ರಂದು ಪ್ರಧಾನಿ ಮೋದಿ ನೋಟುಗಳ ಅಮಾನ್ಯ ಘೋಷಣೆ ಮಾಡಿದ ಬಳಿಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿ, ಕಪ್ಪುಹಣವನ್ನು ಸಕ್ರಮವನ್ನಾಗಿ ಪರಿವರ್ತಿಸಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಒಂದು ಕಂಪೆನಿ 2,134 ಮತ್ತು ಮತ್ತೂಂದು ಕಂಪೆನಿ 900 ಖಾತೆಗಳನ್ನು ಹೊಂದಿದ್ದವು ಎಂದು ಗೊತ್ತಾಗಿದೆ.
ಇಂಥ ಗಮನಾರ್ಹ ಮಾಹಿತಿಯನ್ನು 13 ಬ್ಯಾಂಕ್‌ಗಳು ಕೇಂದ್ರ ಸರಕಾರದ ಜತೆ ಹಂಚಿಕೊಂಡಿವೆ. ನೋಟುಗಳ ಅಮಾನ್ಯ ಬಳಿಕ 5 ಸಾವಿರ ಕಂಪೆನಿಗಳು ವಿವಿಧ ಖಾತೆಗಳ ಮೂಲಕ 4,570 ಕೋಟಿ ರೂ. ಮೊತ್ತ ವನ್ನು ಠೇವಣಿ ಇರಿಸಿ, ವಿತ್‌ಡ್ರಾ ಮಾಡಿಕೊಂಡಿವೆ. ಹೀಗಾಗಿ, ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಸಂಶಯಿಸಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಕೂಡ ಅವುಗಳ ವಹಿವಾಟುಗಳ ಮೂಲ ಕಂಡುಹಿಡಿಯುವುದು ಕಷ್ಟವಾಗಿ ಪರಿಣಮಿಸಿದೆ.
3,800 ಕೋ. ರೂ. ಠೇವಣಿ: ಬ್ಯಾಂಕೊಂದರಲ್ಲಿ ಮೂರುಸಾವಿರ ಕಂಪೆನಿಗಳು ತೆರೆದಿದ್ದ ಸಂಶಯಾಸ್ಪದ ಖಾತೆಯನ್ನು ಗುರುತಿಸಲಾಗಿದೆ. 2016ರ ನ.8ರಂದು ಅವುಗಳಲ್ಲಿ ಒಟ್ಟಾರೆಯಾಗಿ 13 ಕೋಟಿ ರೂ. ಮೊತ್ತ ಇತ್ತು. ಅಮಾನ್ಯ ಘೋಷಣೆ ಬಳಿಕ ಆ ಕಂಪೆನಿಗಳು ಬರೋಬ್ಬರಿ 3,800 ಕೋಟಿ ರೂ.ಗಳನ್ನು ಠೇವಣಿ ಇರಿಸಿ, ವಿತ್‌ಡ್ರಾ ಮಾಡಿಕೊಂಡಿದ್ದವು. ಖಾತೆಗಳನ್ನು ಸ್ತಂಭನಗೊಳಿಸುವ ವೇಳೆ 200 ಕೋಟಿ ರೂ.ಗಳನ್ನು ಮಾತ್ರ ಉಳಿಸಿಕೊಂಡಿದ್ದ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ತೆರಿಗೆ ಕ್ಷೇತ್ರದ ಪರಿಣತರೊಬ್ಬರು ಮಾತನಾಡಿ ಕಂಪೆನಿಗಳು ಈ ಖಾತೆಗಳ ಮೂಲಕ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿರುವ ತೆರಿಗೆ ಮಾಹಿತಿ ಸಂಶಯಕ್ಕೆ ಒಳಗಾಗಿರುವ ಒಟ್ಟು ಕಂಪೆನಿಗಳ ಮಾಹಿತಿ ಪೈಕಿ ಶೇ.2.5ರಷ್ಟು ಮಾತ್ರ. ಖಾತೆಗಳ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎಂದು ಕೇಂದ್ರ ವಿತ್ತ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕೊಂದರಲ್ಲಿ ನಡೆದಿದ್ದ ವಹಿವಾಟು
3,000: ಬ್ಯಾಂಕ್‌ನಲ್ಲಿದ್ದ ಒಟ್ಟು ಖಾತೆಗಳು
3,800 : ಕೋಟಿ ರೂ. ವಹಿವಾಟು ನಡೆದ ಮೊತ್ತ
200 : ಕೋಟಿ ರೂ. ಖಾತೆಯಲ್ಲಿ ಕಂಪೆನಿಗಳು ಬಿಟ್ಟ ಮೊತ್ತ
13 : ಕೋಟಿ ರೂ. ಅಮಾನ್ಯ ಕ್ಕಿಂತ ಮೊದಲಿದ್ದ ಮೊತ್ತ
‘ಶೆಲ್’ ಶಾಕ್
13 : ಬ್ಯಾಂಕ್‌ಗಳ ಸಂಖ್ಯೆ
2134 : ಕಂಪೆನಿಯೊಂದು ಹೊಂದಿದ್ದ ಖಾತೆಗಳ ಸಂಖ್ಯೆ
900 : ಮತ್ತೂಂದು ಕಂಪೆನಿಯ ಖಾತೆಗಳ ವಿವರ
5000 : ಠೇವಣಿ ಇರಿಸಿ ವಿತ್‌ಡ್ರಾ ಮಾಡಿರುವ ನಕಲಿ ಸಂಸ್ಥೆಗಳು
4570 : ಕೋಟಿ ರೂ. ಠೇವಣಿ ಇರಿಸಿ, ವಿತ್‌ಡ್ರಾ ಮಾಡಿರುವ ಮೊತ್ತ