ಬೆಂಗಳೂರು: ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಇದೀಗ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮಧ್ಯೆ ರಾಜಕೀಯ ಜಗಳದ ವೇದಿಕೆಯಾಗಿದೆ.
ಪ್ರಧಾನಿ ಭಾಷಣವನ್ನು ಕೇಳಲು ವ್ಯವಸ್ಥೆ ಮಾಡುವಂತೆ ಯುಜಿಸಿ ಎಲ್ಲಾ ವಿಶ್ವವಿದ್ಯಾಲಗಳಿಗೆ ಸೂಚನೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರೆ, ಸಿದ್ದರಾಮಯ್ಯ ತಮ್ಮ ಈ ಮಾತಿಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮಶತಾಬ್ಧಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಕಡ್ಡಾಯವಾಗಿ ವೀಕ್ಷಿಸಬೇಕೆಂಬ ಯುಜಿಸಿ ಆದೇಶ ಆಕ್ಷೇಪಾರ್ಹ. ದೀನದಯಾಳ್ ಉಪಾಧ್ಯಾಯರ ಬಗ್ಗೆ ಭಾಷಣವಾದರೆ ಅದು ಹಿಂದುತ್ವದ ಭಾಷಣವೇ ಆಗಿರುತ್ತದೆ. ಅಂತಹ ಭಾಷಣವನ್ನು ಕೇಳುವ ಅಗತ್ಯವಿಲ್ಲ. ಈ ಬಗ್ಗೆ ವಿಶ್ವವಿದ್ಯಾನಿಲಯಗಳ ಜತೆಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಬಿ.ಎಸ್.ಯಡಿಯೂರಪ್ಪ, ಎಲ್ಲವನ್ನೂ ಹಳದಿ ಕಣ್ಣಿನಿಂದ ನೋಡುವ ಮುಖ್ಯಮಂತ್ರಿಗಳ ರೀತಿಯನ್ನು ಖಂಡಿಸುತ್ತೇನೆ. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಸಂಸ್ಕೃತಿ ಬಗ್ಗೆ ಮಾಡಿದ್ದ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣೆ ಮಾಡುವುದನ್ನು ಇತರರು ಕೇಳಬೇಕು ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾದರೆ ಈ ದೇಶದ ಬಗ್ಗೆ, ಹಿಂದೂ ಸಂಸ್ಕೃತಿ ಬಗ್ಗೆ, ಭಾರತೀಯರ ಬಗ್ಗೆ ನಿಲುವೇನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಜತೆಗೆ ಇವರು ಮುಸ್ಲಿಮರೋ, ಕ್ರೈಸ್ತರೋ, ಹಿಂದೂಗಳ್ಳೋ ಎಂಬುದನ್ನು ಜನತೆಗೆ ತಿಳಿಸಬೇಕು ಮತ್ತು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಇನ್ನೊಂದೆಡೆ ಬಿಜೆಪಿಯವರು ಸ್ವಾಮಿ ವಿವೇಕನಂದರ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ವಿವೇಕಾನಂದರ ವಿಚಾರಧಾರೆಗಳಿಗೂ ಬಿಜೆಪಿಯವರ ತತ್ವಕ್ಕೂ ಸಂಬಂಧವಿಲ್ಲ. ವಿವೇಕಾನಂದರ ಆದರ್ಶ ಪಾಲಿಸುವುದಾದರೆ ಪರಧರ್ಮ ಸಹಿಷ್ಣುತತೆ ಹಾಗೂ ಇತರೆ ಧರ್ಮಗಳನ್ನು ಗೌರವಿಸಿ ಪಾಲಿಸಬೇಕು. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಈ ರೀತಿ ನಡೆದುಕೊಳ್ಳುತ್ತಿಲ್ಲ. ವಿವೇಕಾನಂದರನ್ನು ತಮ್ಮ ಸ್ವತ್ತು ಎಂದು ಬಿಜೆಪಿಯವರು ಹೇಳುವುದಾದರೆ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.