Advertisement

ಸ್ಮಾರ್ಟ್‌ ಅಂಗನವಾಡಿ: ಜಿಲ್ಲೆಗೆ 1,239 ಫೋನ್

09:58 PM Aug 25, 2020 | mahesh |

ಉಡುಪಿ: ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಡಿಜಿಟಲ್‌ ಮಾಡುವ ನಿಟ್ಟಿನಲ್ಲಿ ಪೋಷಣ್‌ ಅಭಿಯಾನದಡಿಯಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗಾಗಿ 1,239 ಸ್ಮಾರ್ಟ್‌ಫೋನ್‌ ಮುಂಜೂರಾಗಿವೆ. ಆದರೆ ಇನ್ನೂ ಸಿಮ್‌ ಕಾರ್ಡ್‌ ಸಿಗದೆ ವಿತರಣೆಯಾಗಿಲ್ಲ.

Advertisement

ಅಂಗನವಾಡಿ ಆನ್‌ಲೈನ್‌ ವ್ಯಾಪ್ತಿಗೆ
ಕೇಂದ್ರ ಸರಕಾರವು ಪೋಷಣ್‌ ಅಭಿಯಾನ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರ ಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಯೋಜನೆ ಸಿದ್ಧಪಡಿಸಿ, ಸ್ನೇಹಾ ಆ್ಯಪ್‌ ರೂಪಿಸಿದೆ. ಇಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತೃಪೂರ್ಣ, ಮಾತೃ ವಂದನ, ಮಾತೃಶ್ರೀ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಕೇಂದ್ರದ ಪ್ರತಿನಿತ್ಯದ ಆಗುಹೋಗುಗಳ ಕುರಿತ ಸುಮಾರು 40 ಬಗೆಯ ಕಡತಗಳನ್ನು ಈ ಆ್ಯಪ್‌ ಮೂಲಕ ನಿರ್ವಹಣೆ ಮಾಡಬಹುದಾಗಿದೆ. ಕಾರ್ಯಕರ್ತೆ ಯರು ಸ್ಮಾರ್ಟ್‌ಫೋನ್‌ ಮೂಲಕ ದಾಖಲಿಸುವ ಪ್ರತಿ ವಿವರವು ಇಲಾಖೆಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಅಡಕವಾಗುತ್ತವೆ. ಈ ದತ್ತಾಂಶವನ್ನು ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಕುಳಿತಲ್ಲೇ ಪರಾಮರ್ಶಿಸಬಹುದು.

1,239 ಸ್ಮಾರ್ಟ್‌ ಫೋನ್‌
ಉಡುಪಿ ಜಿಲ್ಲೆಯಲ್ಲಿ 1,191 ಕಾರ್ಯಕರ್ತೆಯರು, 48 ಮಂದಿ ಮೇಲ್ವಿಚಾರಕರು ಸೇರಿದಂತೆ ಒಟ್ಟು 1,239 ಮಂದಿಗೆ ಸ್ಮಾರ್ಟ್‌ಫೋನ್‌ ಸಿಗಲಿದೆ. ಇಂಟರ್‌ನೆಟ್‌ ಸೇವಾ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,108 ಕಾರ್ಯಕರ್ತೆಯರು, 83 ಮಂದಿ ಮೇಲ್ವಿಚಾರಕರಿಗೆ ಸ್ಮಾರ್ಟ್‌ಫೋನ್‌ ಸಿಗಲಿದೆ.

ವಿತರಣೆಗೆ ಹಿನ್ನಡೆ
ಸ್ಮಾರ್ಟ್‌ಫೋನ್‌ ಬಂದು 15 ದಿನಗಳು ಕಳೆದಿವೆ. ಈ ಯೋಜನೆಯಡಿ ಸರಕಾರ ಉಚಿತವಾಗಿ ವಿತರಿಸುವ ಸಿಮ್‌ಕಾರ್ಡ್‌ ಇಲಾಖೆಯ ಕೈಸೇರದ ಕಾರಣದಿಂದ ಸ್ಮಾರ್ಟ್‌ಫೋನ್‌ ವಿತರಣೆಯ ಕೆಲಸ ಆರಂಭವಾಗಿಲ್ಲ.

ನೆಟ್‌ವರ್ಕ್‌ ಸಮಸ್ಯೆ ಇರದು!
ಈಗಾಗಲೇ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನೆಟ್‌ವರ್ಕ್‌ಗಳ ಸರ್ವೇ ನಡೆಸಿ, ಯಾವ ನೆಟ್‌ವರ್ಕ್‌ ಅಗತ್ಯವಿದೆ ಎನ್ನುವ ಮಾಹಿತಿ ಸಂಗ್ರಹಿಸಿ ನಿರ್ದಿಷ್ಟ ನೆಟ್‌ವರ್ಕ್‌ ಸಿಮ್‌ ನೀಡಲು ನಿರ್ಧರಿಸಲಾಗಿದೆ. ಇದರಿಂದ ನೆಟ್‌ವರ್ಕ್‌ ಸಮಸ್ಯೆ ಇರದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

2,382 ನೌಕರರು
ಉಡುಪಿ ತಾಲೂಕಿನಲ್ಲಿ 274, ಕುಂದಾಪುರ ತಾಲೂಕಿನಲ್ಲಿ 412, ಬ್ರಹ್ಮಾವರ ತಾಲೂಕಿನಲ್ಲಿ 275, ಕಾರ್ಕಳ ತಾಲೂಕಿನಲ್ಲಿ 230 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,191 ಅಂಗನವಾಡಿ ಕೇಂದ್ರಗಳಿವೆ. ಕಾರ್ಯಕರ್ತೆಯರು ಹಾಗೂ ಸಹಾಯಕ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 2,382 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕ್ರಮ ಅಗತ್ಯ
ಅಂಗನವಾಡಿ ಮತ್ತು ಮೇಲ್ವಿಚಾರಕರಿಗೆ ಸ್ಮಾರ್ಟ್‌ಫೋನ್‌ ಮಂಜೂರಾದರೂ ಸಿಮ್‌ಕಾರ್ಡ್‌ ವಿತರಣೆಯಲ್ಲಾದ ವಿಳಂಬದಿಂದ ತುಸು ಹಿನ್ನಡೆಯಾಗಿದೆ.

ಸಿಮ್‌ಕಾರ್ಡ್‌ ದೊರೆತ ತತ್‌ಕ್ಷಣ ವಿತರಣೆ
ಪೋಷಣ್‌ ಅಭಿಯಾನದಡಿ 3ನೇ ಹಂತದಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿಗಳಿಗೆ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಸಿಮ್‌ ಕಾರ್ಡ್‌ ದೊರೆತ ತತ್‌ಕ್ಷಣ ವಿತರಣೆ ಕೆಲಸ ಆರಂಭವಾಗಲಿದೆ.
– ಆರ್‌. ಸೇಸಪ್ಪ , ಉಪನಿರ್ದೇಶಕರು, ಮಹಿಳಾ ಮತ್ತು  ಮಕ್ಕಳ ಇಲಾಖೆ, ಉಡುಪಿ

ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಸ್ನೇಹಾ ಆ್ಯಪ್‌ ಬಳಕೆಗೆ ಪ್ರತ್ಯೇಕ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರು ಸ್ಮಾರ್ಟ್‌ ಫೋನ್‌ ಮೂಲಕವೇ ಮಕ್ಕಳ ಆಧಾರ್‌ ಸಂಖ್ಯೆ ಜೋಡಣೆ ಹಾಗೂ ಅಂಗನವಾಡಿಗಳನ್ನು ಜಿಪಿಎಸ್‌ ಜಾಲಕ್ಕೆ ಸಂಪರ್ಕಿಸುವ ಕಾರ್ಯ ಆರಂಭವಾಗಲಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ತಲುಪಿದ್ದು, ಕಾರ್ಯ ಚಟುವಟಿಕೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next