ಮಂಗಳೂರು: ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಹಲವು ಆತಂಕಗಳಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಕಾರ್ಯವೊಂದು ಜರಗುತ್ತಿದೆ. ಮರಣಾನಂತರ ಇನ್ನೊಬ್ಬರ ಬಾಳಿಗೆ ಬೆಳಕಾಗುವ ಸಲುವಾಗಿ ಜಿಲ್ಲೆಯ 12,000ಕ್ಕೂ ಹೆಚ್ಚು ಮಂದಿ ನೇತ್ರದಾನದ ಸಂಕಲ್ಪ ತೊಟ್ಟಿದ್ದು, ಜನವರಿ 23ರಂದು ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಇದರ ಅಧಿಕೃತ ಘೋಷಣೆ ನಡೆಯಲಿದೆ.
340 ನೇತ್ರದಾನಿಗಳನ್ನಷ್ಟೇ ಗುರುತಿಸಲು ಸಾಧ್ಯ ವಾದ ದ.ಕ. ಜಿಲ್ಲೆಯಲ್ಲಿ, ಡಾ| ಎಂ.ಆರ್. ರವಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿದ ಒಂದೇ ವರ್ಷದಲ್ಲಿ ನೇತ್ರದಾನಿ ಗಳ ಸಂಖ್ಯೆ 12,000 ದಾಟಿರುವುದು ವಿಶೇಷ.
ನೇತ್ರದಾನದ ಮೂಲಕ ಅಂಧತ್ವ ನಿವಾರಿಸುವ ಉದ್ದೇಶದಿಂದ ಜಿಲ್ಲಾ ಅಂಧತ್ವ ವಿಭಾಗದಿಂದ ನೇತ್ರದಾನಿಗಳ ಹುಡುಕಾಟ ನಡೆದಿತ್ತು. ಸುಮಾರು 340 ಮಂದಿ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಹಾಕಿ ನೇತ್ರದಾನ ಮಾಡುವ ಸಂಕಲ್ಪ ತೊಟ್ಟಿದ್ದರು. 2016ರ ಡಿಸೆಂಬರ್‌ನಲ್ಲಿ ಜಿ.ಪಂ.ನ ನೂತನ ಸಿಇಒ ಆಗಿ ಡಾ| ಎಂ.ಆರ್. ರವಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯಲ್ಲಿ 10,000 ಮಂದಿ ನೇತ್ರದಾನಿಗಳನ್ನು ಒಟ್ಟುಗೂಡಿಸಬೇಕು ಎಂದು ಸಂಕಲ್ಪಿಸಿದ್ದರು. ಅಲ್ಲದೆ ತಮ್ಮ ವೈವಾಹಿಕ
ಜೀವನದ ಬೆಳ್ಳಿಹಬ್ಬ ಸಂದರ್ಭದಲ್ಲಿ ಪತ್ನಿ ಸಮೇತ ನೇತ್ರದಾನ ಪತ್ರಕ್ಕೆ ಸಹಿ ಹಾಕಿ ಕಣ್ಣುದಾನದ ಘೋಷಣೆ ಮಾಡಿದ್ದರು.
ಜಿಲ್ಲೆಯ ವಿವಿಧ ವರ್ಗಗಳ 10,000 ಮಂದಿಯನ್ನು ಸಂಪರ್ಕಿಸಿ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಹಾಕಿಸಬೇಕು ಎಂಬುದು ಜಿ.ಪಂ. ಸಿಇಒ ಗುರಿಯಾಗಿತ್ತು. ನಿರಂತರ ಜಾಗೃತಿಯಿಂದಾಗಿ ಗುರಿ ಮೀರಿದ ಸಾಧನೆ ಸಾಧ್ಯವಾಗಿದೆ. ಘೋಷಣೆ ಮಾಡಿದವರ ಸಂಖ್ಯೆ 12,000ದ ಗಡಿ ದಾಟಿದೆ.
ಇದಕ್ಕಾಗಿ ಜಿ.ಪಂ. ಜತೆಗೆ ನೇತ್ರತಜ್ಞ ಡಾ| ರತ್ನಾಕರ್ ಅವರ ತಂಡ ಸುಮಾರು ಏಳು ತಿಂಗಳಿನಿಂದ ಶ್ರಮಿಸಿದೆ. ಕಳೆದ ಡಿಸೆಂಬರ್‌ನಲ್ಲೇ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಹಾಕುವ ಕೆಲಸ ಅಂತಿಮಗೊಂಡಿದೆ. ಈಗ ಜನವರಿ 23ರಂದು ಅಷ್ಟೂ ಮಂದಿಯ ನೇತ್ರದಾನವನ್ನು ಅಧಿಕೃತವಾಗಿ ಘೋಷಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ| ಎಂ.ಆರ್. ರವಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಈ 12,000 ಮಂದಿ ನೇತ್ರದಾನಿಗಳಲ್ಲಿ ವಿವಿಧ ವರ್ಗದ ಜನರು ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಮುಖ್ಯವಾಗಿ ಇದು ಜಿ.ಪಂ.ನಿಂದ ಆರಂಭವಾದ ಕೆಲಸವಾದ್ದರಿಂದ ಆ ಕಚೇರಿ ಯಿಂದಲೇ 150 ಮಂದಿ ನೌಕರರು ನೇತ್ರದಾನ ಘೋಷಿಸಿದ್ದಾರೆ.
- ಧನ್ಯಾ ಬಾಳೆಕಜೆ