Advertisement

ಲಾಹೋರ್‌ನಲ್ಲಿ ವಾಲ್ಮೀಕಿ ದೇಗುಲ ಪುನಾರಂಭ: ಭಕ್ತರಿಗೆ ಮುಕ್ತವಾದ 1200 ವರ್ಷ ಹಳೆಯ ದೇವಾಲಯ

07:59 PM Aug 04, 2022 | Team Udayavani |

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ರಾಜಧಾನಿ ಲಾಹೋರ್‌ನಲ್ಲಿ ಇರುವ ದೇವಸ್ಥಾನವು ಕೊನೆಗೂ ಭಕ್ತರಿಗೆ ಮುಕ್ತವಾಗಿದೆ. 1,200 ವರ್ಷಗಳ ಇತಿಹಾಸ ಹೊಂದಿರುವ ವಾಲ್ಮೀಕಿ ದೇಗುಲದ ಜಮೀನು ಎರಡು ದಶಕಗಳ ಕಾಲ ಕ್ರಿಶ್ಚಿಯನ್‌ ಕುಟುಂಬದ ವಶದಲ್ಲಿತ್ತು. ಅದನ್ನು ಸ್ಥಳೀಯ ಸರ್ಕಾರದ ಸಂಸ್ಥೆಯೊಂದು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಹಸ್ತಾಂತರಿಸಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ದೀರ್ಘ‌ಕಾಲದಿಂದ ಕಾನೂನು ಹೋರಾಟ ನಡೆಯುತ್ತಿತ್ತು.

Advertisement

ಸರ್ಕಾರಿ ಆಸ್ತಿ ನಿರ್ವಹಣಾ ಮಂಡಳಿಯ ವಕ್ತಾರ ಅಮೀರ್‌ ಹಶ್ಮಿ ಬುಧವಾರ ದೇಗುಲವನ್ನು ಉದ್ಘಾಟಿಸಿದರು. 100 ಹಿಂದೂಗಳು, ಸಿಖ್‌ ಸಮುದಾಯದ ಕೆಲವರು, ಮುಸ್ಲಿಮರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ದೇಗುಲವನ್ನು ಮೂಲ ಯೋಜನೆಯಂತೆ ಪೂರ್ಣ ಪ್ರಮಾಣದಲ್ಲಿ ನವೀಕರಿಸಲಾಗುತ್ತದೆ ಎಂದು ಹಶ್ಮಿ ಹೇಳಿದರು.

ಎರಡು ದಶಕಗಳ ಹಿಂದೆ ತಾವೆಲ್ಲರೂ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೆವು. ದೇಗುಲದಲ್ಲಿ ಕೇವಲ ವಾಲ್ಮೀಕಿ ಎಂಬ ಜಾತಿಯ ಸಮುದಾಯದವರಿಗೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲು ಅನುಮತಿ ನೀಡಲಾಗುತ್ತಿತ್ತು ಎಂದು ಜಮೀನು ವಶಪಡಿಸಿಕೊಂಡಿದ್ದ ಕ್ರಿಶ್ಚಿಯನ್‌ ಕುಟುಂಬ ವಾದಿಸಿತ್ತು.

ಲಾಹೋರ್‌ನಲ್ಲಿ ಕೃಷ್ಣ ದೇಗುಲವು ಈಗಾಗಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಈಗ ವಾಲ್ಮೀಕಿ ದೇಗುಲವೂ ತೆರೆದಿರುವುದು ಹಿಂದೂ ಸಮುದಾಯಕ್ಕೆ ಖುಷಿ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next