Advertisement
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ 3,000 ಹೊಸ ಬಸ್ ಖರೀದಿಸುವ ಗುರಿ ಇತ್ತು. ಆದರೆ ಕಂಪೆನಿಗಳು ಮಾರ್ಚ್ ಅಂತ್ಯದ ವೇಳೆಗೆ 1,200 ಬಸ್‌ಗಳನ್ನಷ್ಟೇ ಪೂರೈಸಲು ಸಾಧ್ಯವೆಂದು ತಿಳಿಸಿವೆ. ಆ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯಕ್ಕೆ 1,200 ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಎಲೆಕ್ಟ್ರಿಕ್ ಬಸ್ ಸೇವೆ ಒದಗಿಸಲು ನಾನಾ ಕಂಪೆನಿಗಳು ಆಸಕ್ತಿ ತೋರಿವೆ. ಹಂಗೇರಿಯ ಕಂಪೆನಿಯೊಂದು ಎಲೆಕ್ಟ್ರಿಕ್ ಬಸ್ ಪೂರೈಸಿ, ನಿರ್ವಹಣೆಯನ್ನೂ ಮಾಡಲು ಮುಂದೆ ಬಂದಿದೆ. ಕಿ.ಮೀ. ಇಲ್ಲವೇ ದಿನದ ಆಧಾರದಲ್ಲಿ ಶುಲ್ಕ ಪಾವತಿ ಬಗ್ಗೆ ಚರ್ಚೆಯಾಗಬೇಕಿದೆ. ಒಟ್ಟಾರೆ ಸೇವೆಯಿಂದ ಗಳಿಸುವ ಲಾಭಾಂಶವನ್ನು ಸಂಸ್ಥೆ ಮತ್ತು ಸಾರಿಗೆ ಇಲಾಖೆಗೆ 60:40ರ ಅನುಪಾತದಲ್ಲಿ ಹಂಚಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ. ಆದರೆ ಯಾವುದೂ ಅಂತಿಮವಾಗಿಲ್ಲ ಎಂದು ತಿಳಿಸಿದರು.
Related Articles
ಈಶಾನ್ಯ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ 2,800 ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬಂದಿ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು, ಮೆರಿಟ್ ಆಧಾರದಲ್ಲೇ ನೇಮಕವಾಗಲಿದೆ. ಹಾಗಾಗಿ ಅಭ್ಯರ್ಥಿಗಳು ಮಧ್ಯವರ್ತಿಗಳ ವಂಚನೆ ಜಾಲಕ್ಕೆ ಬೀಳಬಾರದು ಎಂದು ಲಕ್ಷ್ಮಣ ಸವದಿ ಮನವಿ ಮಾಡಿದರು.
Advertisement
ವೋಲ್ವೋ ಬಸ್‌ಗಳಲ್ಲಿ ಸ್ವತ್ಛತೆ, ಗುಣಮಟ್ಟದ ಸೇವೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ವೋಲ್ವೋ ಬಸ್ ಖರೀದಿ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ. 2 ಕೋ. ರೂ. ವೆಚ್ಚದಲ್ಲಿ ಖರೀದಿಸುವ ಬಸ್‌ನ ನಿರ್ವಹಣೆ ದುಬಾರಿಯಾಗಿದೆ. ಡೀಸೆಲ್ ಬಳಕೆ ಪ್ರಮಾಣವೂ ಹೆಚ್ಚಾಗಿದೆ. ಹಾಗಾಗಿ ಮಲ್ಟಿ ಆಕ್ಸೆಲ್ ಬಸ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಚಾಲಕರು, ನಿರ್ವಾಹಕರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
1,500 ಕೋ.ರೂ. ಕೊರತೆ?ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾರಿಗೆ ಇಲಾಖೆಯ ತೆರಿಗೆ ಆದಾಯದಲ್ಲಿ ಸುಮಾರು 1,500 ಕೋ. ರೂ. ಕೊರತೆಯಾಗುವ ನಿರೀಕ್ಷೆ ಇದೆ. ಕಳೆದ ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ವಾಹನ ನೋಂದಣಿ ಕಡಿಮೆಯಿದ್ದ ಕಾರಣ ತೆರಿಗೆ ಆದಾಯ ಇಳಿಕೆಯಾಗಿತ್ತು. ಜನವರಿಯಿಂದ ವಾಹನ ನೋಂದಣಿ ಹೆಚ್ಚಾಗಿದ್ದು, ತೆರಿಗೆ ಆದಾಯವೂ ಸಂಗ್ರಹವಾಗುತ್ತಿದೆ. ಆದರೂ 2019-20ನೇ ಸಾಲಿನಲ್ಲಿ 7,100 ಕೋ. ರೂ. ತೆರಿಗೆ ಆದಾಯ ಸಂಗ್ರಹ ಗುರಿ ತಲುಪಲು ಕಷ್ಟಸಾಧ್ಯವಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.