ಮುಂಬೈ: ಕೋವಿಡ್ ಸೋಂಕಿನಿಂದಾಗಿ ಉಂಟಾಗಿರುವ ಅಪಾರ ನಷ್ಟವನ್ನು ತುಂಬಲು ಭಾರತದ ಅರ್ಥವ್ಯವಸ್ಥೆಗೆ 12 ವರ್ಷಗಳೇ ಬೇಕಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಟಿಸಿರುವ ವರದಿ ಹೇಳಿದೆ.
ಅರ್ಥವ್ಯವಸ್ಥೆಯ ಮೇಲೆ ಕೊರೊನಾ ಬೀರಿರುವ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸಿರುವ ವರದಿಯು, ಸೋಂಕಿನ ಅವಧಿಯಲ್ಲಿ ಬರೋಬ್ಬರಿ 52 ಲಕ್ಷ ಕೋಟಿ ರೂ.ಗಳಷ್ಟು ಆದಾಯ ನಷ್ಟ ಉಂಟಾಗಿರುವುದಾಗಿ ಹೇಳಿದೆ.
ಕರೆನ್ಸಿ ಮತ್ತು ಹಣಕಾಸಿಗೆ ಸಂಬಂಧಿಸಿದ ವರದಿಯ “ಸಾಂಕ್ರಾಮಿಕದ ಗಾಯಗಳು’ ಎಂಬ ಅಧ್ಯಾಯದಲ್ಲಿ, ಒಂದರ ನಂತರ ಒಂದರಂತೆ ಬಂದ ಕೊರೊನಾ ಅಲೆಗಳು ಆರ್ಥಿಕತೆಯ ಚೇತರಿಕೆಗೆ ಹೇಗೆ ಅಡ್ಡಿಯಾದವು, ಜಿಡಿಪಿ ಹೇಗೆ ಕುಸಿಯುತ್ತಾ ಸಾಗಿತು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಒಪ್ಪಿಗೆ: ಸಿಎಂ
2020-21, 21-22 ಮತ್ತು 22-23ರ ಹಣಕಾಸು ವರ್ಷದಲ್ಲಿ ಪ್ರತಿ ವರ್ಷ ಕ್ರಮವಾಗಿ 19.1 ಲಕ್ಷ ಕೋಟಿ ರೂ., 17.1 ಲಕ್ಷ ಕೋಟಿ ರೂ., ಮತ್ತು 16.4 ಲಕ್ಷ ಕೋಟಿ ರೂ. ಆದಾಯ ನಷ್ಟವಾಗಿದೆ. ಒಟ್ಟಿನಲ್ಲಿ ಭಾರತವು 2034-35ರ ವೇಳೆಗೆ ಕೋವಿಡ್-19 ನಷ್ಟದಿಂದ ಹೊರಬರಬಹುದು ಎಂದು ವರದಿ ಅಂದಾಜಿಸಿದೆ.