Advertisement

ಕಣ್ಣಿಲ್ಲದವಳಿಗೆ ಅವನು ಬೆಳಕು ತೋರಿಸಿದ!

11:12 PM Feb 12, 2022 | Team Udayavani |

“ನನ್ನ ಹೆಸರು ಪ್ರಮೋದಿನಿ ರೌಲ್‌. ಒರಿಸ್ಸಾ ರಾಜ್ಯದ ಕಟಕ್‌ ನಮ್ಮ ಊರು. ಅಪ್ಪ-ಅಮ್ಮ ಮತ್ತು ಮೂರು ಹೆಣ್ಣು ಮಕ್ಕಳು-ಇದು ನನ್ನ ಕುಟುಂಬ. ನಾನೇ ಮೊದಲ ಮಗಳು. ನನಗೆ 4 ವರ್ಷ ಆಗಿದ್ದಾಗಲೇ ಅನಾರೋಗ್ಯದ ಕಾರ ಣದಿಂದಾಗಿ ಅಪ್ಪ ತೀರಿಕೊಂಡರು. ನಮ್ಮನ್ನು ಸಲಹುವ ಹೊಣೆ ಚಿಕ್ಕಪ್ಪನ ಮೇಲೆ ಬಿತ್ತು. ಈ ಹೊಸ ಜವಾಬ್ದಾರಿ ಹೊರಲು ಅವರಿಗೆ ಇಷ್ಟವಿರಲಿಲ್ಲ. ಅಮ್ಮನನ್ನು ಕರೆದು -“ನಾನು ಬೆಂಬಲಕ್ಕೆ ಇರಬಲ್ಲೇ ಅಷ್ಟೇ. ನಿಮ್ಮ ಕುಟುಂಬದ ಹೊಣೆ ನಿಮ್ಮದು. ಹೆಣ್ಣು ಮಕ್ಕಳು ಮನೆಕೆಲಸ ಮಾಡಿಕೊಂಡು ಇರಲಿ. ಅವರನ್ನು ಓದಿ ಸಬೇಕು ಎನ್ನುತ್ತಾ  ಹೊಸ ಖರ್ಚು ತಂದುಕೊಳ್ಳಬೇಡಿ’ ಎಂದು ನಿಷ್ಠುರ ವಾಗಿ ಹೇಳಿಬಿಟ್ಟರು. ಈ ಮಾತನ್ನು ಒಪ್ಪದ ಅಮ್ಮ, ಅವರಿವರ ಬಳಿ ಸಾಲ ಮಾಡಿ ನಮ್ಮನ್ನು ಶಾಲೆಗೆ ಸೇರಿಸಿದರು. “ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ಕೊಂಡರೆ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ’ ಎಂಬ ಕಿವಿಮಾತನ್ನೂ ಹೇಳಿದರು.

Advertisement

ಶ್ರದ್ಧೆಯಿಂದ ಓದಿ, ಹೆಚ್ಚು ಅಂಕ ಗಳಿಸಬೇಕು, ಭವಿಷ್ಯದಲ್ಲಿ ಐಎಎಸ್‌ ಅಧಿಕಾರಿಯಾಗಬೇಕು ಅನ್ನುವುದು ನನ್ನ ಗುರಿಯಾಗಿತ್ತು. ಹೀಗಿದ್ದಾಗಲೇ ಗೆಳತಿಯೊಬ್ಬಳು ಕುತೂಹಲದಿಂದ ಕೇಳಿದಳು: “ಒಬ್ಬ ಆಸಾಮಿ ದಿನವೂ ನಿನ್ನ ಹಿಂದೆಯೇ ಬರ್ತಾನೆ, ಯಾರು ಅದು?’

ಅವಳ ಮಾತು ಕೇಳಿ ಬೆಚ್ಚಿಬಿದ್ದೆ. ಮರುದಿನದಿಂದ ಸೂಕ್ಷ್ಮವಾಗಿ ಗಮನಿಸಿದೆ. ಹೌದು, ಕಟ್ಟುಮಸ್ತಾಗಿದ್ದ ಒಬ್ಬ ವ್ಯಕ್ತಿ ನಾನು ಹೋದ ಕಡೆಗೆಲ್ಲ ಬರುತ್ತಿದ್ದ. ಕಡೆಗೊಮ್ಮೆ ಆತನ ಎದುರು ನಿಂತು- “ನೀವು ಯಾರು? ಯಾಕೆ ಹೀಗೆ ಹಿಂದೆ ಹಿಂದೆಯೇ ಬರ್ತೀರಾ? ನಾನು ತುಂಬ ಓದುವ ಆಸೆ ಇಟ್ಕೊಂಡಿದ್ದೀನಿ. ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ ಅಂದೆ. ಆವತ್ತು ಏನೂ ಮಾತಾಡದೇ ಹೋದ ಆ ವ್ಯಕ್ತಿ ಎರಡು ವಾರದ ಅನಂತರ ನಮ್ಮ ಮನೆಗೇ ಬಂದು- “ನನ್ನ ಹೆಸರು ಸಂತೋಷ್‌. ಮಿಲಿಟರಿಯಲ್ಲಿದ್ದೀನಿ. ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾಳೆ. ಅವಳನ್ನು ಮದುವೆ ಮಾಡಿಕೊಡಿ’ ಎಂದು ಅಮ್ಮನನ್ನೇ ಕೇಳಿದ. “ಅವಳಿಗೆ ಈಗಷ್ಟೇ 16 ವರ್ಷ. ಡಿಗ್ರಿ ಮಾಡಿ ಕೆಲಸಕ್ಕೆ ಸೇರಬೇಕು ಅಂತ ಅವಳಾಸೆ. ಅನಂತರವೇ ಮದುವೆ. ದಯವಿಟ್ಟು ಒತ್ತಾಯ ಮಾಡಬೇಡಿ’ ಅಂದಳು ಅಮ್ಮ. ಸರಿ, ನಾನು ಕಾಯಲು ಸಿದ್ಧ, ಎಂದು ಉತ್ತರಿಸಿ ಹೋದವನು, ಮರುದಿನದಿಂದ ಮತ್ತೆ ಹಿಂಬಾಲಿಸತೊಡಗಿದ. ಆದಷ್ಟೂ ಮಟ್ಟಿಗೆ ಅವನನ್ನು ಅವಾಯx… ಮಾಡಿದೆ. ನಾನು ಹೋಗಿಬರುವ ದಾರಿಗಳನ್ನು ಬದಲಿಸಿಕೊಂಡೆ.

ಅದು 2009ರ ಒಂದು ಸಂಜೆ. ನಾನು ಕಸಿನ್‌ ಜತೆ ಮನೆಗೆ ಬರುತ್ತಿದ್ದೆ. ಆಗಲೇ ಗೆಳೆಯನ ಜತೆ ಬೈಕ್‌ನಲ್ಲಿ ಬಂದ ಸಂತೋಷ್‌ – “ತಪ್ಪಿಸಿಕೊಂಡು ಓಡಾಡಲು ಕಲಿತಿದ್ದೀಯಾ? ನಾನು ಹೇಳಿದಂತೆ ಕೇಳಿದ್ರೆ ಸರಿ. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರಲ್ಲ’ ಎಂದು ಧಮಕಿ ಹಾಕಿದ.

ಅವನ ಮಾತು ಕೇಳಿ ಎಲ್ಲಿಲ್ಲದ ಸಿಟ್ಟು ಬಂತು. “ಕೇಳದಿದ್ರೆ ಏನು ಮಾಡ್ತೀಯ, ಕೊಲೆ ಮಾಡ್ತೀಯ?’ ಎಂದು ಜೋರಾಗಿಯೇ ಕೇಳಿದೆ. ನೀನು ನನಗೆ ಸಿಗಲಿಲ್ಲ ಅಂದ್ರೆ ಬೇರೆ ಯಾರಿಗೂ ಸಿಗಬಾರ್ದು ಎಂದವನೇ ಇದ್ದಕ್ಕಿದ್ದಂತೆ ಬಾಟಲಿ ಯೊಂದನ್ನು ತೆಗೆದು, ಅದರಲ್ಲಿದ್ದ ದ್ರವವನ್ನು ಮುಖಕ್ಕೆ ಎರಚಿ ಹೋಗಿಬಿಟ್ಟ. ಅಷ್ಟೆ; ನಿಗಿನಿಗಿ ಕೆಂಡವನ್ನು, ಕುದಿಯುವ ಎಣ್ಣೆಯನ್ನು ಮೈಮೇಲೆ ಹಾಕಿದಂತಾ ಯಿತು. ಮುಖ ಮುಚ್ಚಿಕೊಳ್ಳಲು ಹೋದರೆ, ಚರ್ಮ ಕಿತ್ತು ಬಂತು. ಇದ್ದಕ್ಕಿದ್ದಂತೆ ಕತ್ತಲಾವರಿಸಿತು. ಉರಿ, ನೋವು ತಡೆಯಲಾಗದೆ ನಾನು ಬಿದ್ದು ಒದ್ದಾಡುತ್ತಿದ್ದರೆ, ನನ್ನ ಕಸಿನ್‌ ಅಮ್ಮನಿಗೆ ವಿಷಯ ತಿಳಿಸಲು ಮನೆಗೆ ಓಡಿದ್ದ. ಸುತ್ತಲಿನ ಜನ- “ನೋಡಿದ್ರಾ? ಅವನು ಆ್ಯಸಿಡ್‌ ಎರಚಿ ಹೋಗಿಬಿಟ್ಟ. ಲವ್‌ ಕೇಸ್‌ ಅನ್ನಿಸ್ತದೆ. ಅಪ್ಪಿತಪ್ಪಿ ಕೂಡ ಮುಟ್ಟಬೇಡಿ, ಆ ಮೇಲೆ ಕೇಸ್‌-ಕೋರ್ಟ್‌ ಅಂತ ಅಲೆಯಬೇಕಾಗ್ತದೆ’ ಎನ್ನುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸಿತು.”ತುಂಬಾ ತಡವಾಗಿ ಆಸ್ಪತ್ರೆಗೆ ಬಂದಿದ್ದೀರಿ. ಈಗ ನಾವು ಏನೂ ಮಾಡಲು ಆಗಲ್ಲ. ಆ್ಯಸಿಡ್‌ ಬಿದ್ದಿರುವ ಕಾರಣಕ್ಕೆ ದೃಷ್ಟಿ ಹೋಗಿ ಬಿಟ್ಟಿದೆ. ಅದು ಸರಿಹೋಗುತ್ತೆ ಅಂತ ಗ್ಯಾರಂಟಿ ಕೊಡಲು ಆಗಲ್ಲ. ಇದ್ದಕ್ಕಿ ದ್ದಂತೆ ಆದ

Advertisement

ಶಾಕ್‌ನ ಪರಿಣಾಮ, ಸ್ಟ್ರೋಕ್‌ ಆಗಿಬಿಟ್ಟಿದೆ. ಹಾಗಾಗಿ ನಡೆದಾಡಲೂ ಆಗಲ್ಲ. ಇನ್ನೇನಿದ್ರೂ ಮಲಗಿದ್ದೇ ಬದುಕು ಕಳೆಯಬೇಕು…

“ವೈದ್ಯರು ಹೀಗೆನ್ನುವ ವೇಳೆಗೆ ನಾನು ಆಸ್ಪತ್ರೆ ಸೇರಿ 8 ತಿಂಗಳಾಗಿತ್ತು. ನನ ಗೆ ಯಾರೂ ಕಾಣುತ್ತಿರಲಿಲ್ಲ. ದೇಹದ ಕೆಲವು ಭಾಗಕ್ಕೆ ಸ್ಪರ್ಶ ಜ್ಞಾನವೂ ಇರಲಿಲ್ಲ. ಕೈ-ಕಾಲಿನ ಗಾಯಗಳಲ್ಲಿ ಕೀವು ತುಂಬಿದೆ. ಸುಟ್ಟ ಚರ್ಮದಿಂದ ದುರ್ವಾಸನೆ, ಆಪರೇಷನ್‌ ಆಗಬೇಕು… ಹೀಗೆಲ್ಲ ಮಾತುಗಳು ಕೇಳಿಸುತ್ತಿದ್ದವು. ಆಗೆಲ್ಲ ನಾನು- ದೇವರೇ, ಯಾಕೆ ಇಂಥಾ ಶಿಕ್ಷೆ ಕೊಡ್ತಾ ಇದ್ದೀಯ? ಇಂಚಿಂಚಾಗಿ ಕೊಲ್ಲುವ ಬದಲು ಒಮ್ಮೆಗೇ ಸಾವು ಕರುಣಿಸು ಎಂದು ಪ್ರಾರ್ಥಿಸುತ್ತಿದ್ದೆ.

ಇಂಥಾ ಕಡು ಕಷ್ಟದ ದಿನಗಳಲ್ಲೇ ಸೂರಜ್‌ನ ಪರಿಚಯವಾಗಿದ್ದು. ವೃತ್ತಿಯಿಂದ ಮೆಡಿಕಲ್‌ ರೆಪ್‌ ಆಗಿದ್ದ ಸೂರಜ್‌ಗೆ ನಾನು ದಾಖಲಾಗಿದ್ದ ಆಸ್ಪತ್ರೆಯ ನರ್ಸ್‌ ಜತೆ ಸ್ನೇಹವಿತ್ತು. ಆಕೆಯನ್ನು ಭೇಟಿ ಮಾಡುವ ನೆಪ ದಲ್ಲಿ ಬಂದವನು ನಮ್ಮಮ್ಮನನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆಗೆ, ಆಸ್ಪತ್ರೆ ಖರ್ಚು ಭರಿಸುವ ಸಲುವಾಗಿ ಅಮ್ಮ ತನ್ನ ಉಳಿತಾಯದ ಹಣ, ಮಕ್ಕಳ ಭವಿಷ್ಯಕ್ಕೆಂದು ಕೂಡಿಟ್ಟಿದ್ದ ಒಡವೆಯನ್ನೆಲ್ಲ ಮಾರಿ ಕೇರಾಫ್ ಫ‌ುಟಾ³ತ್‌ ಸ್ಟೇಜ್‌ ತಲುಪಿದ್ದಳು. ನಾನು ಸಾವು-ಬದುಕಿನ ಮಧ್ಯೆ ಒದ್ದಾಡುತ್ತಿದ್ದೆ. ಇಂಥ ಸಂದರ್ಭದಲ್ಲಿ- ಏನೂ ಆಗಲ್ಲಮ್ಮಾ, ಹೆದರ ಬೇಡಿ. ಕಷ್ಟಗಳು ಕೊನೆಯಾಗ್ತವೆ. ನಿಮ್ಮ ಮಗಳು ಹುಷಾರಾಗ್ತಾಳೆ, ಎಂದೆಲ್ಲ ಧೈರ್ಯ ಹೇಳುತ್ತಿದ್ದ. ಜೋಕ್‌ ಹೇಳಿ ಅಮ್ಮನನ್ನು ನಗಿಸುತ್ತಿದ್ದ. ಅದೊಮ್ಮೆ ಹೀಗೇ ಮಾತಾಡುತ್ತಾ, “ಯಾಕೆ ಅಳ್ತೀರಾ? ಇನ್ನು ಆರೇ ತಿಂಗ ಳಲ್ಲಿ ನಿಮ್ಮ ಮಗಳು ನಡೆಯುವಂತೆ ಆಗಿಬಿಡ್ತಾಳೆ’ ಅಂದ. ತತ್‌ಕ್ಷಣವೇ ಅಲ್ಲಿಗೆ ಬಂದ ಅವನ ನರ್ಸ್‌ ಗೆಳತಿ, ನಿನಗೆ ಬುದ್ಧಿ ಇಲ್ವಾ ಸೂರಜ್‌? ಜೀವನ ಪೂರ್ತಿ ಅವಳಿಗೆ ನಿಲ್ಲಲು ಶಕ್ತಿ ಬರಲ್ಲ ಅಂತ ಡಾಕ್ಟರ್‌ ಹೇಳಿದ್ದಾರೆ. ನೀನು ಏನೇನೋ ಹೇಳ್ತಾ ಇದ್ದೀಯ ಎಂದು ಗದರಿದಳು. ಈ ಮಾತನ್ನು ಚಾಲೆಂಜ್‌ ಆಗಿ ತೆಗೆದುಕೊಂಡ ಸೂರಜ್‌- “ಇನ್ನು 6 ತಿಂಗಳಲ್ಲಿ ಇವಳು ನಡೆಯುವಂತೆ ಮಾಡೇ ಮಾಡ್ತೇನೆ, ನೋಡ್ತಾ ಇರು’ ಅಂದುಬಿಟ್ಟ.

ಮರು ದಿನದಿಂದಲೇ ನನ್ನೊಡನೆ ಮಾತಿಗೆ ಶುರುವಿಟ್ಟ ಸೂರಜ್‌. ಅವನ ಪ್ರತಿ ಮಾತಿನಲ್ಲೂ ಅಕ್ಕರೆ, ಪ್ರೀತಿ, ಕಾಳಜಿ, ಸಾಂತ್ವನ, ಧೈರ್ಯ, ಮಮತೆ ತುಂಬಿರುತ್ತಿತ್ತು. ಅದುವರೆಗೂ ಶವದಂತೆ ಮಲಗಿದ್ದ ನನ್ನನ್ನು ಮೆಲ್ಲಗೆ ಎತ್ತಿ ಕೂರಿಸಿದ. ಕಾಲು- ಕೈಗಳಿಗೆ ಮಸಾಜ್‌ ಮಾಡಿದ. ಸಂಜೆಯ ಹೊತ್ತು ಕಿಟಕಿಯ ತಂಗಾಳಿ ಮೈಸೋಕುವಂತೆ ಮಾಡಿದ. ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸಿದ. ಕಾರ್ಗತ್ತಲ ರಾತ್ರಿ ಮತ್ತು ಹುಣ್ಣಿಮೆ ಬೆಳದಿಂಗಳಿನ ವೈಭವದ ಬಗ್ಗೆ ಮಾತಾಡಿದ. ಮೆಡಿಕಲ್‌ ರೆಪ್‌ ಕೆಲಸ ಬಿಟ್ಟು ಸೋಶಿಯಲ್‌ ವರ್ಕರ್‌ ಕೆಲಸ ಹಿಡಿದ. ನನ್ನ ಸೇವೆಗೇ ಸಮಯವನ್ನು ಮುಡಿಪಾಗಿಟ್ಟ. ನನಗೋ ಆಯೋಮಯ. “ಸ್ವಾರ್ಥವಿಲ್ಲದೆ ಮನುಷ್ಯ ಹೀಗೆಲ್ಲ ಸಹಾಯ ಮಾಡಲು ಸಾಧ್ಯವಾ? ನಾವೀಗ ಭಿಕ್ಷೆ ಬೇಡುವ ಹಂತ ತಲುಪಿದ್ದೇವೆ. ಅಂಥವರಿಗೆ ನೆರವಾದರೆ ನಿನಗೆ ಸಿಗುವುದಾದರೂ ಏನು?’ ಎಂದು ಅದೊಮ್ಮೆ ಅವನನ್ನೇ ಕೇಳಿದೆ. “ನನ್ನ ಮನಸ್ಸಿನ ಖುಷಿಗೆ ಈ ಕೆಲಸ ಮಾಡ್ತಾ ಇದ್ದೇನೆ. ನಿಮ್ಮಿಂದ ನನಗೆ ಏನೂ ಬೇಕಿಲ್ಲ. ನೀನು ನಡೆಯುವಂತಾದ್ರೆ ಅಷ್ಟೇ ಸಾಕು’ ಎಂದು ನನ್ನ ಬಾಯಿಮುಚ್ಚಿಸಿದ. ಇಂಥ ಮನಸ್ಸಿನ ಹುಡುಗ ಸಂಗಾತಿಯಾಗಿ ಸಿಗಬಾರ್ದಾ? ಎಂದು ಒಳಮನಸ್ಸು ಪಿಸುಗುಟ್ಟಿತು. ಕಣ್ಣಿಲ್ಲದ, ನಡೆಯಲಾಗದ, ಮುಖವೇ ಇಲ್ಲದ ನನ್ನನ್ನು ಯಾರು ಒಪ್ಪುತ್ತಾರೆ? ಅಂದುಕೊಂಡು ಸುಮ್ಮನಾದೆ.

ಈ ವೇಳೆಗೆ ನಾನು ಆಸ್ಪತ್ರೆ ಸೇರಿ 5 ವರ್ಷಗಳು ಕಳೆದಿದ್ದವು. ಈ ನಡುವೆ ಸೂರಜ್‌ನ ಪ್ರಯತ್ನದಿಂದ ನಾನು ನಡೆಯಲು ಕಲಿತುಬಿಟ್ಟಿದ್ದೆ. ಇವಳಿಗೆ ಎದ್ದು ನಿಲ್ಲುವ ಶಕ್ತಿ ಬರಲು ಸಾಧ್ಯವೇ ಇಲ್ಲ ಎಂದಿದ್ದ ವೈದ್ಯರು, ತಮ್ಮ ಕಣ್ಣೆದುರೇ ನಡೆದ ವಿಸ್ಮಯ ಕಂಡು ಬೆರಗಾದರು. ಇದು ನಿಜವಾದ ಪವಾಡ ಎಂದು ಉದ್ಗರಿಸಿದರು. ಕಡೆಗೊಮ್ಮೆ ಆಸ್ಪತ್ರೆಯಿಂದ ಮನೆಗೆ ಹೊರಟಾಗ ಚಿಕ್ಕಪ್ಪ- “ಅವಳ ಮೈಯಿಂದ ದುರ್ವಾಸನೆ ಬರ್ತದೆ. ನಮ್ಮ ಜತೆಗೆ ಇರಬೇಡಿ’ ಅಂದುಬಿಟ್ಟರು. ಪರಿಣಾಮ, ಚಿಕ್ಕದೊಂದು ಬಾಡಿಗೆ ಮನೆಗೆ ಶಿಫ್ಟ್ ಆದೆವು.

ಬದುಕು ನಡೆಯಬೇಕಲ್ಲವೇ? ಅಮ್ಮ ಅವರಿವರ ಮನೆ ಕೆಲಸಕ್ಕೆ ಸೇರಿ ಕೊಂಡ ಳು. ನಾನು ಪ್ರಜ್ಞೆಯಿಲ್ಲದೆ ಮಲಗಿರುತ್ತಿದ್ದೆ. ಕೆಲವು ಹೆಂಗಸರು ಆರೋಗ್ಯ ವಿಚಾರಿಸುವ ನೆಪದಲ್ಲಿ ಬಂದು, ಹೊದಿಕೆ ಸರಿಸಿ ಚೆಕ್‌ ಮಾಡುತ್ತಿದ್ದರು. ಅನಂತರ- “ಎಲ್ಲ ಸುಟ್ಟುಹೋಗಿದೆ. ಇವಳು ಬದು ಕೋದು ಅನುಮಾನ. ಇವಳನ್ನು ಯಾರು ಮದುವೆ ಆಗ್ತಾರೆ? ಹೀಗೆ ಬದುಕಿ ಏನುಪಯೋಗ? ಅವನು ಸುಮ್ಮಸುಮ್ಮನೆ ಆ್ಯಸಿಡ್‌ ಹಾಕಲು ಸಾಧ್ಯವಾ? ಇವಳದ್ದೇ ಏನೋ ತಪ್ಪಿರಬೇಕು’ ಎಂದು ಚುಚ್ಚಿ ಮಾತಾಡುತ್ತಿದ್ದರು.

ಪರಿಚಯದ ಜನರಿಂದ ದೂರವಿದ್ದರೆ ಮನಸ್ಸಿಗೆ ನೆಮ್ಮದಿ ಸಿಗಬಹುದು ಅನ್ನಿಸಿದ್ದೇ ಆಗ. ದಿಲ್ಲಿಯಲ್ಲಿ ಚಾವ್‌ ಫೌಂಡೇಶನ್‌ ಎಂಬ ಸಂಸ್ಥೆ ಇದೆಯೆಂದೂ ಅಲ್ಲಿ ಆ್ಯಸಿಡ್‌ ಸಂತ್ರಸ್ತರಿಗೆ ಅಗತ್ಯ ಚಿಕಿತ್ಸೆ ಮತ್ತು ನೌಕರಿ ಸಿಗುವುದೆಂದೂ ತಿಳಿದುಬಂತು. ಇಷ್ಟು ದಿನ ಎಲ್ಲರಿಗೂ ಹೊರೆಯಾಗಿ ಬದುಕಿದ್ದು ಸಾಕು ಎಂದು ನಿರ್ಧರಿಸಿ, ಮನೆಯವರನ್ನು ಒಪ್ಪಿಸಿ ದಿಲ್ಲಿಗೆ ಹೊರಟುನಿಂತೆ. ಆಗಲೇ ಸೂರಜ್‌ ನನ್ನನ್ನು ಕೇಳಿಬಿಟ್ಟ: “ನನ್ನನ್ನು ಮದುವೆ ಆಗ್ತೀಯಾ?’

ಚಾವ್‌ ಫೌಂಡೇಶನ್‌ನಲ್ಲಿ ಹೊಸದೊಂದು ಜಗತ್ತಿನ ಪರಿಚಯ ವಾಯಿತು. ಅದುವರೆಗೂ ಆ್ಯಸಿಡ್‌ ದಾಳಿಗೆ ತುತ್ತಾದವಳು ನಾನು ಮಾತ್ರ ಅಂದುಕೊಂಡಿದ್ದೆ. ಆದರೆ ಈಗ ನನ್ನಂತೆಯೇ ನಲುಗಿಹೋಗಿದ್ದ ಹಲವರು ಸುತ್ತಲೂ ಇದ್ದರು. ಅವರ ಕಥೆಗಳನ್ನು ಕೇಳುತ್ತಾ ನನ್ನ ಕಷ್ಟ ಮರೆತೆ. ಈ ಸಂದರ್ಭದಲ್ಲಿ ಬಿಟ್ಟೂಬಿಡದೆ ನೆನಪಾಗುತ್ತಿದ್ದವನು ಸೂರಜ್‌. ದಿಲ್ಲಿಗೆ ರೈಲು ಹತ್ತುವಾಗ, ಅವನಿಗೆ ಏನೂ ಉತ್ತರ ಹೇಳದೆ ಬಂದುಬಿಟ್ಟಿದ್ದೆ. ಆದರೆ ಅವನು ಜತೆಗಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಅನ್ನಿಸತೊಡಗಿತ್ತು. ನಾನು ಹೀಗೆಲ್ಲ ಯೋಚಿಸುತ್ತಿದ್ದಾಗಲೇ ಸೂರಜ್‌ ಫೋನ್‌ ಮಾಡಿ- “ನಾಳೆಯೇ ಚೆನ್ನೈಗೆ ಹೋಗಬೇಕು. ಅಲ್ಲಿರುವ ಶಂಕರ್‌ ಆಸ್ಪತ್ರೆಯಲ್ಲಿ ನಿನಗೆ ಕಣ್ಣಿನ ಆಪರೇಷನ್‌ ಮಾಡ್ತಾರೆ. ದೃಷ್ಟಿ ಮರಳುತ್ತದೆ’ ಅಂದ. ಈ ಚಿಕಿತ್ಸೆಗೆ ಅವನು ಯಾರ್ಯಾರ ನೆರವು ಪಡೆದನೋ, ಹೇಗೆ ಹಣ ಹೊಂದಿಸಿದನೋ ಭಗವಂತ ಬಲ್ಲ. ಅನಂತರದಲ್ಲಿ ಎಲ್ಲವೂ ಕನಸಿ ನಂತೆ ನಡೆದುಹೋಯಿತು. ಆಪರೇಷನ್‌ ಮಾಡಿದ ವೈದ್ಯರು ಇನ್ನು ಎರಡು ವಾರದಲ್ಲಿ ಶೇ.20 ರಷ್ಟು ದೃಷ್ಟಿ ಬರುತ್ತದೆ ಅಂದರು. ಎರಡಲ್ಲ, ಎಂಟು ವಾರ ಕಳೆದರೂ ಏನೂ ಕಾಣಲಿಲ್ಲ. ನಮಗೆ ಅದೃಷ್ಟವಿಲ್ಲ ಅಂದುಕೊಂಡು ದಿಲ್ಲಿಗೆ ವಿಮಾನ ಹತ್ತಿದೆವು. ಕೆಲವು ಸಮಯದ ಅನಂತರ ಬೆಳಕು ಕಂಡಂತಾಯಿತು. ಅಚ್ಚರಿ ಯಿಂದ ರೆಪ್ಪೆ ಬಡಿದರೆ ಮೋಡವೂ ಕಾಣಿಸಿತು. ತತ್‌ಕ್ಷಣ, ಅದು ವಿಮಾನ ಅನ್ನು ವುದನ್ನೂ ಮರೆತು- ಸೂರಜ್‌, ನನಗೆ ಬೆಳಕು ಕಾಣಿಸ್ತು, ಮೋಡ ಕಾಣಿಸ್ತು, ಕೆಳಗಿರುವ ಕಾಪೆìಟ್‌ ಕಾಣಿಸ್ತು ಎಂದು ಭಾವೋದ್ವೇಗದಿಂದ ಹೇಳಿದೆ. ವಿಷಯ ತಿಳಿದ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ಹೊಡೆದರು…

ಅನಂತರದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವುದೇ ಸರಿ. ಸೌಂದರ್ಯವಲ್ಲ, ಪರಿಶುದ್ಧ ಮನಸ್ಸಷ್ಟೇ ಮುಖ್ಯ ಎಂದು ನಂಬಿ, ಆ್ಯಸಿಡ್‌ ಸಂತ್ರಸ್ತೆಯನ್ನೇ ಮದುವೆಯಾಗುವುದಾಗಿ ಪಟ್ಟುಹಿಡಿದ ಸೂರಜ್‌, ಮನೆಯವರನ್ನೂ ಒಪ್ಪಿಸಿ ಪ್ರಮೋದಿನಿಯ ಕೈ ಹಿಡಿದಿದ್ದಾನೆ. ಈ ದಿಟ್ಟೆ ಪ್ರಮೋದಿನಿ, ತನಗೆ ಆ್ಯಸಿಡ್‌ ಎರಚಿ ಪರಾರಿಯಾಗಿದ್ದವನನ್ನು ಪತ್ತೆ ಹಚ್ಚಿ, ಅದನ್ನು ಒಡಿಶಾದ ಸಿಎಂ ನವೀನ್‌ ಪಟ್ನಾಯಕ್‌ ಅವರ ಗಮನಕ್ಕೂ ತಂದು ಅವನನ್ನು ಜೈಲಿಗೆ ಕಳುಹಿಸುವಲ್ಲಿ ಯಶ ಕಂಡಿದ್ದಾಳೆ. ಆ್ಯಸಿಡ್‌ ದಾಳಿಗೆ ತುತ್ತಾದ ಎಲ್ಲರ ಬಾಳಿಗೂ ಒಬ್ಬ ಸಹೃದಯಿಯ ಪ್ರವೇಶವಾಗಲಿ’ ಅನ್ನುತ್ತಾ ಮಾತು ಮುಗಿಸುತ್ತಾಳೆ ಪ್ರಮೋದಿನಿ…

ನಾಳೆ ಪ್ರೇಮಿ ಗಳ ದಿನ. ಆ ನೆಪದಲ್ಲಿ-ಸಂತಸ, ಸಂಕಟ, ಸಂಭ್ರಮ, ಸಡಗರ, ಸರಸ, ಸಾಹಸ, ಸಮರ್ಪಣೆ, ವಿಷಾದ, ವಿನೋದ- ಇವೆಲ್ಲ ಭಾವದ ಸಮಪಾಕದಂತಿರುವ ಈ ರಿಯಲ್‌ ಸ್ಟೋರಿ.

 

-ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next