ಚತ್ತೀಸ್ ಗಢ್: ಕೋವಿಡ್ 19 ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದ್ದರೆ, ಮತ್ತೊಂದೆಡೆ ತೆಲಂಗಾಣದಿಂದ ಚತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿರುವ ಊರಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದ 12 ವರ್ಷದ ಬಾಲಕಿ ಮನೆ ತಲುಪಲು ಒಂದು ಗಂಟೆಯ ದಾರಿ ಕ್ರಮಿಸಲು ಬಾಕಿ ಇರುವಾಗಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಜಾಮ್ಲೂ ಮಕ್ದಂ ಎಂಬ 12 ವರ್ಷದ ಬಾಲಕಿ ತೆಲಂಗಾಣದ ಮೆಣಸಿನ ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಲಾಕ್ ಡೌನ್ ಹಿನ್ನೆಲೆಯಲ್ಲಿ 11ಮಂದಿ ವಲಸೆ ಕಾರ್ಮಿಕರ ಜತೆ ಏಪ್ರಿಲ್ 15ರಂದು ಕಾಲ್ನಡಿಗೆಯಲ್ಲಿ ಕಾಡಿನ ಹಾದಿಯ ಮೂಲಕ ಸತತ ಮೂರು ದಿನಗಳ ಕಾಲ ನಡೆದಿರುವುದಾಗಿ ವರದಿ ತಿಳಿಸಿದೆ.
ಜಾಮ್ಲೂ ಹಾಗೂ ಇತರೆ ವಲಸೆ ಕಾರ್ಮಿಕರು ಇನ್ನೇನು 14 ಕಿಲೋ ಮೀಟರ್ ದೂರ ಸಾಗಿದ್ದರೆ ಮನೆ ತಲುಪುತ್ತಿದ್ದರು. ಆದರೆ ಅಷ್ಟರಲ್ಲಿಯೇ ಕಳೆದ ಮೂರು ದಿನಗಳಿಂದ ನಡೆದು ಹೈರಾಣಾಗಿದ್ದ ಬಾಲಕಿಗೆ ಶನಿವಾರ ಮಧ್ಯಾಹ್ನ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಕೊನೆಗೆ ಆ್ಯಂಬುಲೆನ್ಸ್ ನಲ್ಲಿ ಬಾಲಕಿಯ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಬಳಿಕ ಮನೆಗೆ ತರಲಾಗಿತ್ತು ಎಂದು ವರದಿ ವಿವರಿಸಿದೆ.
ಬಾಲಕಿಯ ದೇಹದಲ್ಲಿ ನೀರಿನ ಅಂಶ ತೀವ್ರವಾಗಿ ಕಡಿಮೆಯಾಗಿದ್ದು, ನಿಶ್ಯಕ್ತಿಗೊಳಗಾಗಿದ್ದಳು. ಬಾಲಕಿಯ ಕೋವಿಡ್ 19 ವೈರಸ್ ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿತ್ತು. ಆಕೆಯ ಸರಿಯಾದ ಊಟವಿಲ್ಲದೇ, ನಿಶ್ಯಕ್ತಿಯಿಂದ ಸಾವನ್ನಪ್ಪಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಬಿಆರ್ ಪೂಜಾರಿ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ತನ್ನ ಮಗಳು ತೆಲಂಗಾಣದ ಮೆಣಸಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಬಾಲಕಿಯ ತಂದೆ ಆ್ಯಂಡೋರಾಮ್ ಮಕ್ದಮ್ ತಿಳಿಸಿದ್ದು, ಆಕೆ ಮೂರು ದಿನಗಳಿಂದ ಸರಿಯಾಗಿ ಊಟ ಮಾಡಿಲ್ಲ ಎಂದು ಜತೆಗಿದ್ದ ವಲಸೆ ಕಾರ್ಮಿಕರು ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಬಾಲಕಿಯ ಕುಟುಂಬಕ್ಕೆ ಚತ್ತೀಸ್ ಗಢ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.