ಲಕ್ನೋ: ಉತ್ತರ ಪ್ರದೇಶದಲ್ಲಿ ಬೀದಿ ನಾಯಿಯ ದಾಳಿ ಮತ್ತೊಂದು ಎಳೆಯ ಜೀವ ಬಲಿಯಾಗಿದೆ. 12 ವರ್ಷದ ಬಾಲಕ ಬೀದಿ ನಾಯಿ ಅಟ್ಟಹಾಸಕ್ಕೆ ಕೊನೆಯುಸಿರೆಳೆದಿದ್ದಾನೆ.
ಮಂಗಳವಾರ (ಮೇ 2 ರಂದು) ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸಿಬಿ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಖಾನಾ ಗೌಂಟಿಯಾ ಗ್ರಾಮದಲ್ಲಿ ತನ್ನ ಸ್ನೇಹಿತರೊಂದಿಗೆ ಅಯಾನ್ ಎಂಬ ಬಾಲಕ ಆಟ ಆಡುತ್ತಿದ್ದ, ಈ ವೇಳೆ ಬೀದಿ ನಾಯಿಗಳ ದಂಡು ಅವನ ಬಳಿ ಬಂದಿದೆ. ಇದರಿಂದ ಬಾಲಕ ಹೆದರಿ ಓಡಿದ್ದಾನೆ. ಓಡುವ ಭರದ ಮೈದಾನದಲ್ಲಿ ಬಿದ್ದಿದ್ದಾನೆ. ಈ ವೇಳೆ ನಾಯಿಗಳು ಅವನ ಮೇಲೆ ಎರಗಿವೆ. ಬಾಲಕನ ಮೇಲೆ ಹಲ್ಲುಗಳಿಂದ ಕಚ್ಚಿ ಗಾಯ ಮಾಡಿವೆ.
ಇದನ್ನು ನೋಡಿದ ಸ್ಥಳೀಯರು ನಾಯಿಗಳ ಅಟ್ಟಹಾಸದಿಂದ ಬಾಲಕನನ್ನು ಬಿಡಿಸಿ, ಆಸ್ಪತ್ರಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇನ್ನೊಂದು ಬಾಲಕನಿಗೂ ಗಾಯಗಳಾಗಿವೆ ಎಂದು ವರದಿ ತಿಳಿಸಿವೆ.
ಯುಪಿಯಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲಲ್ಲ ಎರಡು ತಿಂಗಳ ಹಿಂದಷ್ಟೇ 3 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿ, ಆಕೆಯನ್ನು ಕಚ್ಚಿಕೊಂಡು ಕೆಲ ದೂರ ತೆಗೆದುಕೊಂಡು ಹೋಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ರೀತಿಯ ದಾಳಿ ನಡೆದಿದ್ದು, ಸಿಬಿ ಗಂಜ್ ಪ್ರದೇಶದ ಮಥುರಾಪುರ ಗ್ರಾಮದಲ್ಲಿ ಬೀದಿ ನಾಯಿಗಳು 12 ವರ್ಷದ ಗೋಲು ಎಂಬ ಬಾಲಕನ ಮೇಲೆ ಹಠಾತ್ ದಾಳಿ ನಡೆಸಿ ಗಾಯಗೊಳಿಸಿದ್ದವು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.