ನಾಗಮಂಗಲ: ಜಮೀನು, ತೋಟಗಳಲ್ಲಿ ರೈತರು ಕೊಳವೆ ಬಾವಿಗೆ ಅಳವಡಿಸಿರುವ ಕೇಬಲ್ ಕದ್ದೊಯ್ದಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿ ಮೈಲಾರಪಟ್ಟಣದ ದಾಖಲೆ ಗ್ರಾಮಗಳಾದ ಬಿಟ ಗೋನಹಳ್ಳಿ ಮತ್ತು ಗೊಗ್ಗನಕೊಪ್ಪಲು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಬೆಳಗ್ಗೆ ರೈತರು ತಮ್ಮಕೊಳವೆ ಬಾವಿಯಿಂದ ನೀರು ಹಾಯಿಸಲು ಹೋದಾಗ ಕಳವಿನ ಘಟನೆ ಬೆಳಕಿಗೆ ಬಂದಿದೆ.
ಮೀಟರ್‌ಗೆ 150 ರೂ.ಗಿಂತ ಹೆಚ್ಚು: ಈ ಕುರಿತು “ಉದಯವಾಣಿ’ಯೊಂದಿಗೆ ತಮ್ಮ ಅಳಲು ತೋಡಿ ಕೊಂಡ ರೈತರಾದ ಲಕ್ಷ್ಮಣ, ಗಿರೀಶ್ ಮತ್ತಿತರರು, ಕೊಳವೆ ಬಾವಿಯಿಂದ ನೀರೆತ್ತಲು ಕೊಳವೆ ಬಾವಿಯ ಮೋಟಾರ್ ಮತ್ತು ಸ್ಟ್ರಾಟರ್‌ಗೆ ಸಂಪರ್ಕ ಕಲ್ಪಿಸುವ ಕೇಬಲ್‌ಗಳನ್ನು ಕಳ್ಳರು ತುಂಡರಿಸಿಕೊಂಡು ಹೋಗಿದ್ದಾರೆ. ಮೂವತ್ತರಿಂದ, ನೂರೈವತ್ತು ಅಡಿಗಳಿಗೂ ಮೀರಿ ಕೇಬಲ್ ಕಳವು ಆಗಿದೆ. ಮೀಟರ್‌ಗೆ 150 ರೂ. ಗಿಂತ ಹೆಚ್ಚು ಬೆಲೆ ಬಾಳುವಕೇಬಲ್ ಇದಾಗಿದ್ದು ರೈತರಿಗೆ ನಷ್ಟ ತುಂಬಿ ಕೊಡುವವರು ಯಾರು ಎಂದು ನೋವನ್ನು ತೋಡಿಕೊಂಡರು.
ಕರೆಂಟ್ ಕಣ್ಣಾಮುಚ್ಚಾಲೆ: ಬೇಸಿಗೆಯಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ನಡುವೆ ಕೇಬಲ್ ಕಳವು ಆಗಿದ್ದು ಒಣಗುತ್ತಿರುವ ಗಿಡಗಂಟಿಗಳಿಗೆ ನೀರು ಹಾಯಿಸಲು ತ್ರಾಸ ಪಡುವಂತಾಗಿದೆ. ಪೊಲೀಸರು ಗ್ರಾಮಗಳಲ್ಲಿ ಹೆಚ್ಚು ಗಸ್ತು ಹಾಕುವ ಮೂಲಕ ಇಂಥ ಕಳವು ಪ್ರಕರಣ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಮಾಹಿತಿ ನೀಡಿ: ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಗ್ರಾಮಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಜತೆಗೆ ಅಂಥವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.