ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಬುಧವಾರ ನಡೆದ ಕಾನೂನು ಸುವ್ಯವಸ್ಥೆಗೆ ಸವಾಲು ಎನಿಸುವಂತಹ ಬೆಚ್ಚಿ ಬೀಳುವ ಕೃತ್ಯದಲ್ಲಿ ರೋಡ್‌ವೇಸ್ ಬಸ್‌ನೊಳಗೆ ಸುಮಾರು ಹನ್ನೆರಡು ಮಂದಿ ದುಷ್ಕರ್ಮಿಗಳು ನುಗ್ಗಿ ಪೊಲೀಸ್ ತಂಡದಿಂದ ಬೆಂಗಾವಲು ಪಡೆಯುತ್ತಿದ್ದ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯಲಾಗುತ್ತಿದ್ದ ಮತ್ತೊಬ್ಬ ಕೊಲೆ ಆರೋಪಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭರತ್‌ಪುರದ ಹಲೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ಸುಮಾರು 12 ಜನರು ಬಸ್ ಅನ್ನು ತಡೆದು ಕೃತ್ಯ ಎಸಗಿದ್ದಾರೆ. ಬಸ್ಸಿನೊಳಗೆ ನುಗ್ಗಿ ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿ ಬಳಿಕ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ
2022 ರ ಕೊಲೆ ಪ್ರಕರಣದ ಆರೋಪಿಗಳಾದ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಅವರನ್ನು ಜೈಪುರದಿಂದ ಭರತ್‌ಪುರಕ್ಕೆ ಎರಡು ಎಸ್‌ಎಲ್‌ಆರ್ ಹೊಂದಿದ್ದ ಹೆಡ್ ಕಾನ್‌ಸ್ಟೆಬಲ್ ನೇತೃತ್ವದ ಏಳು ಪೊಲೀಸರ ತಂಡ ಕರೆದೊಯ್ಯುತ್ತಿತ್ತು.
ದಾಳಿ ಬಳಿಕ ಇಬ್ಬರು ಆರೋಪಿಗಳನ್ನು ಭರತ್‌ಪುರದ ಆರ್‌ಬಿಎಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ವೈದ್ಯರು ಕುಲದೀಪ್ ಜಘೀನಾ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದು, ವಿಜಯಪಾಲ್ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್‌ಪಿ ಭರತ್‌ಪುರ್ ಮೃದುಲ್ ಕಚ್ಚವಾ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೌಸಾ ಸೇರಿದಂತೆ ಸಮೀಪದ ಜಿಲ್ಲೆಗಳಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ಹೆದ್ದಾರಿಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.