Advertisement

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

11:37 PM Oct 19, 2020 | mahesh |

ಮಹಾನಗರ: ಮಂಗಳೂರು ನಗರವನ್ನು “ಸೈಕಲ್‌ ಸ್ನೇಹಿ’ಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದ್ದು, ನಗರ ವ್ಯಾಪ್ತಿಯ ಸುಮಾರು 12 ಕಿ.ಮೀ. ವ್ಯಾಪ್ತಿಯಲ್ಲಿ ಸೈಕಲ್‌ ಪಥ ನಿರ್ಮಾಣಕ್ಕೆ ಮಹತ್ವದ ಯೋಜನೆಯೊಂದು ರೂಪುಗೊಂಡಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ 8 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಆಕರ್ಷಕ ಸೈಕಲ್‌ ಪಥ ನಿರ್ಮಾಣವಾಗಲಿದ್ದು, ನಗರದ ಪ್ರಮುಖ ಓಣಿಗಳು ಮತ್ತು ರಸ್ತೆ ಬದಿಯಲ್ಲಿ ಈ ಟ್ರ್ಯಾಕ್‌ ಹಾದು ಹೋಗಲಿದೆ. ಈ ಯೋಜನೆಯ ಕುರಿತು ಸದ್ಯ ವಿಸ್ತೃತ ಯೋಜನ ವರದಿ ತಯಾರಿ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಮಂಗಳೂರು ನಗರದಲ್ಲಿ ಸೈಕಲ್‌ ಪಥ ನಿರ್ಮಾಣಕ್ಕೆ ಕೆಂಪು ಮತ್ತು ಹಳದಿ ಎಂಬ ಎರಡು ಪ್ರತ್ಯೇಕ ಪಥ ನಿರ್ಮಾಣವಾಗಲಿದೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ. ಅದೇರೀತಿ ಹಳದಿ ಪಥವು ಸುಮಾರು 4 ಕಿ.ಮೀ. ಇರಲಿದ್ದು, ರಸ್ತೆಯ ಬದಿಯಲ್ಲಿ ಸಾಗಲಿದೆ.

ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ನಿರ್ಮಾಣವಾಗುತ್ತಿರುವ ಈ ಸೈಕಲ್‌ ಟ್ರ್ಯಾಕ್‌ ಅನ್ನು “ವಿದ್ಯಾರ್ಥಿ ಸ್ನೇಹಿ ಪಥ’ ಪರಿಕಲ್ಪನೆ ಯಲ್ಲಿ ರೂಪಿಸಲು ನಿರ್ಧರಿಸಲಾಗಿದೆ. ನಗರ ಶೈಕ್ಷಣಿಕ ರಂಗದಲ್ಲಿ ಹೆಸರು ಗಳಿಸಿದ್ದು, ಇಲ್ಲಿ ಹಲವು ವಿದ್ಯಾಸಂಸ್ಥೆಗಳಿವೆ. ರಾಜ್ಯ, ಹೊರ ರಾಜ್ಯ, ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಲಿಯುತ್ತಿದ್ದಾರೆ. ಹೀಗಿರುವಾಗ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಸೈಕಲ್‌ ಪಥ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಇದೇ ಕಾರಣಕ್ಕೆ ನಗರದ ಪ್ರಮುಖ ಕಾಲೇಜು ಭಾಗದಲ್ಲಿಯೇ ನೂತನ ಸೈಕಲ್‌ ಪಥ ಸಾಗಲಿದೆ.

ಮಂಗಳೂರಿನಲ್ಲಿ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ಸೈಕಲ್‌ ಪಾಥ್‌ ಬಗ್ಗೆ ಸೈಕ್ಲಿಂಗ್‌ ಫ್ರೆಂಡ್ಲಿ ಸಿಟಿ ಸಲಹೆಗಾರ ನಿರೇನ್‌ ಜೈನ್‌ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿದ್ದು, “ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಂಗಳೂರು ನಗರದಲ್ಲಿ ಸೈಕಲ್‌ ಪಥ ನಿರ್ಮಾಣವಾಗಲಿದೆ.

ಸದ್ಯ ವಿಸ್ತೃತ ಯೋಜನ ವರದಿ (ಡಿಪಿಆರ್‌) ತಯಾರು ಹಂತದಲ್ಲಿದ್ದು, ಸದ್ಯದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಸೈಕಲ್‌ ಟ್ರ್ಯಾಕ್‌ ನಿರ್ಮಾಣ, ಟ್ರ್ಯಾಕ್‌ ಸಂಪರ್ಕ ವ್ಯವಸ್ಥೆ ಆರಂಭವಾಗಿ ಸುಮಾರು ಐದಾರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎನ್ನುತ್ತಾರೆ.

Advertisement

ಎಲ್ಲೆಲ್ಲಿ ಸೈಕಲ್‌ ಟ್ರ್ಯಾಕ್‌?
ಸ್ಮಾಟ್‌ಸಿಟಿ ಅಧಿಕಾರಿಗಳು ಈಗಾ ಗಲೇ ಗುರುತಿಸಿರುವಂತೆ ಕೆಂಪು ಪಥವು ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌ ನಿಂದ ಆರಂಭವಾಗಿ ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌-ರೈಲು ನಿಲ್ದಾಣ- ಪುರಭವನ-ಸೆಂಟ್ರಲ್‌ ಮಾರುಕಟ್ಟೆ- ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾ ಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌-ಶ್ರೀದೇವಿ ಕಾಲೇಜು ಬಳಿ ಮುಕ್ತಾಯ ಗೊಳ್ಳಲಿದೆ. ಅದೇ ರೀತಿ ಹಳದಿ ಪಥ ಮಾರ್ನಮಿ ಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್ನಿಂದ ಆರಂಭವಾಗಿ ಸೈಂಟ್‌ ಜೋಸೆಫ್‌ ಕಾಲೇಜು, ರೋಶನಿ ನಿಲಯ, ಹೈಲ್ಯಾಂಡ್‌ ಕಾಫಿ ವರ್ಕ್‌, ತೆರಿಗೆ ಕಚೇರಿ ಬಳಿ ಪೂರ್ಣಗೊಳ್ಳಲಿದೆ.

ಉತ್ತೇಜನಕ್ಕೆ ಚಾಲೆಂಜ್‌
ಮಂಗಳೂರು ನಗರವನ್ನು ಸೈಕಲ್‌ ಸ್ನೇಹಿಯಾಗಿಸುವ ಉದ್ದೇಶದಿಂದ ಸೈಕಲ್‌ ಪಾಥ್‌ ನಿರ್ಮಾಣ ಕಾರ್ಯಕ್ಕೆ ಮುಂದಾ ಗಿದ್ದೇವೆ. ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಇಂಡಿಯಾ ಸೈಕಲ್‌ 4 ಚೇಂಜ್‌ ಸರ್ವೇ ಆಯೋಜನೆ ಮಾಡಲಾಗಿದೆ. ಅಂತರ್ಜಾಲ (https://forms.gle/nxaUxqFAGi1uDWui9 ) ಲಿಂಕ್‌ ಮೂಲಕ ನಗರದ ಪ್ರತಿಯೊಬ್ಬ ನಾಗರಿಕರೂ ಸರ್ವೇ ಯಲ್ಲಿ ಪಾಲ್ಗೊಳ್ಳಬಹುದು. ಸಾರ್ವಜನಿಕರು ಅಕ್ಟೋಬರ್‌ ಅಂತ್ಯದವರೆಗೆ ಸರ್ವೇಯಲ್ಲಿ ಪಾಲ್ಗೊಳ್ಳಲು ಅವಕಾಶ ಇತ್ತು. ಆದರೆ ಸದ್ಯ ಡಿಸೆಂ ಬರ್‌ 14ರ ವರೆಗೆ ಮುಂದೂಡಲಾಗುತ್ತದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next