ಹುಬ್ಬಳ್ಳಿ: ಒಂದೇ ಸೂರಿನಡಿ ಹಲವು ಸೇವಾ ಸೌಲಭ್ಯ ನೀಡುವ ಕರ್ನಾಟಕ ಒನ್ ಕೇಂದ್ರಗಳ ಕಾರ್ಯಾರಂಭಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಮಂಗಳವಾರದಿಂದ ಮಹಾನಗರ ವ್ಯಾಪ್ತಿಯ 12 ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ.
ಕೋವಿಡ್ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿತ್ತು. ಹೀಗಾಗಿ ಕರ್ನಾಟಕ ಒನ್ ಕೇಂದ್ರಗಳು ಸಂಪೂರ್ಣ ಸ್ಥಗಿತವಾಗಿದ್ದವು. ಧಾರವಾಡ ವ್ಯಾಪ್ತಿಯಲ್ಲಿ ಸೋಂಕು ಪ್ರಕರಣ ತಹಬದಿಗೆ ಬಂದ ಹಿನ್ನೆಲೆಯಲ್ಲಿ ಧಾರವಾಡ-2 ಹಾಗೂ ನವನಗರ-1 ಕೇಂದ್ರಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿನ ಒಂಭತ್ತು ಕೇಂದ್ರಗಳಿಗೆ ಅನುಮತಿ ನೀಡಿರಲಿಲ್ಲ. ಇದೀಗ ನಗರ ವ್ಯಾಪ್ತಿಯ ಎಲ್ಲ ಕೇಂದ್ರಗಳ ಕಾರ್ಯಾರಂಭಕ್ಕೆ ಅನುಮತಿ ದೊರೆತಿದ್ದು, ಎಲ್ಲ ಕೇಂದ್ರಗಳು ಶುರುವಾಗಿವೆ.
ನಿಯಮ ಪಾಲನೆ ಕಡ್ಡಾಯ: ಸೇವಾ ಕೇಂದ್ರಗಳಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಪ್ರತಿಯೊಬ್ಬರು ಸ್ಯಾನಿಟೈಸರ್ ಬಳಸಿ ಕೇಂದ್ರ ಪ್ರವೇಶಿಸಬೇಕು. ಇದ ರಿಂದ ವಿದ್ಯುತ್ ಬಳಕೆ ಶುಲ್ಕ, ನೀರಿನ ಕರ, ಫೋನ್ ಬಿಲ್, ಆಸ್ತಿಕರ ಪಾವತಿಸುವುದಕ್ಕೆ ಜನರು ಅಲೆದಾಡುವುದು ತಪ್ಪಿದಂತಾಗಿದೆ.
ಆಧಾರ ಸೇವೆ ಕಷ್ಟ: 12 ಕೇಂದ್ರಗಳ ಪೈಕಿ ಒಂಭತ್ತು ಕೇಂದ್ರಗಲ್ಲಿ ಆಧಾರ ಸೇವೆ ನೀಡಲಾಗುತ್ತಿದೆ. ಸುಮಾರು 40 ಸೇವೆಗಳ ಪೈಕಿ ಆಧಾರ ಸೇವಗೆ ಒಂದಿಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಈ ಸೇವೆ ನೀಡುವ ಪ್ರತ್ಯೇಕ ಸಿಬ್ಬಂದಿಯಿದ್ದು, ಅವರ ಬಯೋಮೆಟ್ರಿಕ್ ಆಧರಿಸಿ ಸೇವೆ ನೀಡಬೇಕು. ಒಂದಿಷ್ಟು ಸಿಬ್ಬಂದಿ ಗ್ರಾಮೀಣ ಪ್ರದೇಶದಿಂದ ಬರಬೇಕಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಒಂದಿಷ್ಟು ದಿನ ಈ ಸೇವೆಗೆ ಕೊಂಚ ಹಿನ್ನಡೆಯಾಗಲಿದೆ.
ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದ ಗ್ರಾಹಕರಿಗೆ ಯಾವುದೇ ಸೇವೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಸೂಚಿಸುವನಿಯಮಗಳನ್ನು ಕಡ್ಡಾಯ ಪಾಲನೆ ಮಾಡಲಾಗುವುದು. –
ಅನೀಸ್ ಅಹ್ಮದ್, ಸಹಾಯಕ ಯೋಜನಾ ವ್ಯವಸ್ಥಾಪಕ