ಮುಂಬೈ:ಬಾಲಿವುಡ್ ಯುವ ಪ್ರತಿಭಾವಂತ ನಟ ಸುಶಾಂತ್ (34ವರ್ಷ) ಆತ್ಮಹತ್ಯೆ ಘಟನೆ ಬಗ್ಗೆ ಇಡೀ ಬಾಲಿವುಡ್ ಶಾಕ್ ಗೆ ಒಳಗಾಗಿದೆ…ಮತ್ತೊಂದೆಡೆ ಸುಶಾಂತ್ ಆತ್ಮಹತ್ಯೆಗೆ ಶರಣಾಗುವ ಕೆಲವೆ ಗಂಟೆಗಳ ಮೊದಲು ಮಾಡಿರುವ ನಾಲ್ಕು ಫೋನ್ ಕರೆಗಳ ಬಗ್ಗೆ ಮುಂಬೈ ಪೊಲೀಸರು ಇದೀಗ ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ (ಮುಂಜಾನೆ) 1.47ನಿಮಿಷಕ್ಕೆ ಮೊದಲು ಕರೆ ಮಾಡಿದ್ದು ಪ್ರೀತಿಯ ಗೆಳತಿ ರಿಯಾ ಚಕ್ರವರ್ತಿಗೆ, ಆದರೆ ಆಕೆ ಕರೆಯನ್ನು ಸ್ವೀಕರಿಸಿರಲಿಲ್ಲವಾಗಿತ್ತು. ಕೆಲವೇ ಕ್ಷಣಗಳಲ್ಲಿ ಸುಶಾಂತ್ ಆತ್ಮೀಯ ಗೆಳೆಯ ಮಹೇಶ್ ಶೆಟ್ಟಿಗೆ ಕರೆ ಮಾಡಿದ್ದರು..ಆ ಕರೆಯನ್ನೂ ಮಹೇಶ್ ಸ್ವೀಕರಿಸಿರಲಿಲ್ಲವಾಗಿತ್ತು.
ಭಾನುವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೊದಲು ಮಹೇಶ್ ಮಿಸ್ ಕಾಲ್ ಗಮನಿಸಿ, ಸುಶಾಂತ್ ಗೆ ಕರೆ ಮಾಡಿದ್ದರು. ಆದರೆ ಈ ವೇಳೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಬಳಿಕ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ಬೆಳಗ್ಗೆ 9.30ಕ್ಕೆ ಮತ್ತೆ ಮಹೇಶ್ ಗೆ ಕರೆ ಮಾಡಲು ಪ್ರಯತ್ನಿಸಿದಾಗ ಅದು ವಿಫಲವಾಗಿತ್ತು ಎಂದು ವರದಿ ವಿವರಿಸಿದೆ.
ತನಿಖೆಯ ಪ್ರಕಾರ, ಸುಶಾಂತ್ ಬ್ರೇಕ್ ಫಾಸ್ಟ್ ಗೂ ಮುನ್ನ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದಿದ್ದರು. 10.25ಕ್ಕೆ ಅಡುಗೆಯಾತ ನೀರಜ್ ಸುಶಾಂತ್ ಬೆಡ್ ರೂಂ ಬಾಗಿಲನ್ನು ಬಡಿದು ಏನು ಊಟ ತಯಾರು ಮಾಡಲಿ ಎಂದು ಕೇಳಿರುವುದಾಗಿ ವರದಿ ತಿಳಿಸಿದೆ.
ಸುಶಾಂತ್ ಗೆಳೆಯ ಕೂಡಾ ಈ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಇದ್ದಿದ್ದ. ಆತ 11ಗಂಟೆಗೆ ಎದ್ದು ಸುಶಾಂತ್ ಬಗ್ಗೆ ಅಡುಗೆಯವನ ಬಳಿ ವಿಚಾರಿಸಿದ್ದನಂತೆ. ಸ್ವಲ್ಪ ಸಮಯದ ನಂತರ ಆತ ಸುಶಾಂತ್ ಕೋಣೆಯ ಬಾಗಿಲನ್ನು ಬಡಿದಿದ್ದ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಆತನ ಮೊಬೈಲ್ ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿದ್ದ ಶಬ್ದ ಹೊರಗೆ ಕೇಳಿಸುತ್ತಿತ್ತು. ಈ ವಿಷಯವನ್ನು ಸಹೋದರಿ ರಿತುಗೆ ಮಾಹಿತಿ ನೀಡಿದ್ದ ಎಂದು ವರದಿ ಹೇಳಿದೆ.
ಬಳಿಕ ರಿತು ಕೂಡಾ ಸುಶಾಂತ್ ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದಳು. ಅಷ್ಟೇ ಅಲ್ಲ ಬೆಡ್ ರೂಂ ಬಾಗಿಲು ತೆಗೆಯಲು ಕೀ ಮೇಕರ್ ಗೆ ಕರೆ ಮಾಡಿ ತಿಳಿಸಿದ್ದರು. ಏತನ್ಮಧ್ಯೆ ಘಟನೆ ಬಗ್ಗೆ ರಿತು ಪತಿಗೆ ವಿಷಯವನ್ನು ಹೇಳಿದ್ದರು. ಅವರು ಹರ್ಯಾಣ ಸರ್ಕಾರದ ಅಧಿಕಾರಿಯಾಗಿದ್ದರು, ಅವರು ಕೂಡಲೇ ಮುಂಬೈ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಮಧ್ಯಾಹ್ನ 12.25ಕ್ಕೆ ಬೆಡ್ ರೂಂ ತೆರೆದಾಗ ಸುಶಾಂತ್ ನೇಣಿಗೆ ಶರಣಾಗಿರುವುದು ಕಂಡು ಬಂದಿತ್ತು. ವೈದ್ಯರು ಬಂದು ಪರೀಕ್ಷಿಸಿದ್ದರು ಆದರೆ ಸುಶಾಂತ್ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ತಂದೆ ಕೆಕೆ ಸಿಂಗ್ ಹಾಗೂ ನಾಲ್ವರು ಸಹೋದರಿಯರನ್ನು ಸುಶಾಂತ್ ಅಗಲಿದ್ದಾರೆ. 2002ರಲ್ಲಿ ತಾಯಿ ನಿಧನರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸುಶಾಂತ್ ಮಾನಸಿಕ ಒತ್ತಡಕ್ಕೊಳಗಾಗಿರುವುದಾಗಿ ವರದಿ ವಿವರಿಸಿದೆ.