ಉಡುಪಿ: ಸಂತೆಕಟ್ಟೆ ಬಳಿ ಇರುವ ಮಕ್ಕಳ ದತ್ತು ಸ್ವೀಕಾರ ಕೇಂದ್ರ ‘ಕೃಷ್ಣಾನುಗ್ರಹ’ದ 14 ವರ್ಷದೊಳಗಿನ 12 ಮಂದಿ ಮಕ್ಕಳಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಈ ಮಕ್ಕಳೊಂದಿಗೆ ಆಶ್ರಮದ ಆಯಾ ಸೇರಿದಂತೆ ಒಂಭತ್ತು ಸಿಬ್ಬಂದಿ ಸಹ ಸೋಂಕಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಬಂದಿರುವ ಮಕ್ಕಳು ಸೇರಿ ಎಲ್ಲಾ 21 ಮಂದಿಯನ್ನು ಕೃಷ್ಣಾನುಗ್ರಹ ಆಶ್ರಮದಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ ಎರಡು ಬಾರಿ ವೈದ್ಯರು ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸುತ್ತಿದ್ದಾರೆ. ಯಾರಲ್ಲೂ ಇದುವರೆಗೆ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾಸ್ಕ್ ಧರಿಸಿ ಎಂದು ಹೇಳಿದ ಪಿಡಿಒ ಮೇಲೆ ಹಲ್ಲೆ
ಉಡುಪಿಯ ಅಧಿಕೃತ ದತ್ತು ಸ್ವೀಕಾರ ಕೇಂದ್ರವಾದ ಕೃಷ್ಣಾನುಗ್ರಹದಲ್ಲಿ ಒಟ್ಟು 29 ಮಂದಿ ಅನಾಥ, ವಿಕಲಚೇತನ ಹಾಗೂ ವಿಶೇಷ ಮಕ್ಕಳಿದ್ದು, 10 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದರ ಫಲಿತಾಂಶ ಬುಧವಾರ ಬಂದಿದ್ದು, ಒಟ್ಟು 21 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದೀಗ ಸಂಪೂರ್ಣ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ.
ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯಾಗಿರುವ 17 ಮಕ್ಕಳು ಹಾಗೂ ಇಬ್ಬರು ಸಿಬ್ಬಂದಿಗೆ ಪಕ್ಕದಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕ್ಯಾರಂಟೈನ್ ವ್ಯವಸ್ಥೆ ಮಾಡಲಾಗಿದೆ.