ಪೂಂಛ್: ಭಾರತೀಯ ಸೇನೆಯ ವಾಹನದ ಮೇಲೆ ಗುರುವಾರ ನಡೆದ ದಾಳಿಗೆ ಸಂಬಂಧಿಸಿದಂತೆ 12 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಬಟಾ ಡೋರಿಯಾದ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆದ ಮಾರಣಾಂತಿಕ ಹೊಂಚುದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
ಭಯೋತ್ಪಾದಕ ಗುಂಪಿನ ಗುರುತನ್ನು ಖಚಿತಪಡಿಸಿಕೊಳ್ಳಲು ಬಂಧನಕ್ಕೊಳಗಾದವರನ್ನು ವಿವಿಧ ಹಂತಗಳಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 ಉಗ್ರರು ರಜೌರಿ ಮತ್ತು ಪೂಂಛ್ ನ ಮಾರ್ಗದ ಒಂದು ಬದಿಯಲ್ಲಿರುವ ದಟ್ಟ ಅಡವಿಯಲ್ಲಿ, ಮತ್ತೂಂದು ಬದಿಯ ಕಣಿವೆಯಲ್ಲಿ ಹೊಂಚು ಹಾಕಿ ಸೇನಾ ಟ್ರಕ್ ಆಗಮಿಸುತ್ತಿದ್ದಂತೆ ರಾಕೆಟ್ ಚಾಲಿತ ಗ್ರೆನೇಡ್ ಗಳು ಹಾಗೂ ಅಸಾಲ್ಟ್ ರೈಫಲ್ ಗಳಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಂಛ್ ಮತ್ತು ರಜೌರಿಯಲ್ಲಿ ಸೇನೆಯ ಮೇಲೆ ನಡೆದಿರುವ 4ನೇ ದಾಳಿ ಇದಾಗಿದೆ.
ಇದನ್ನೂ ಓದಿ:ಚಾಂದಿನಿ ಬಾರ್ ಚಿತ್ರ ವಿಮರ್ಶೆ: ಬಾರ್ ನೊಳಗೆ ಬದುಕು ಕಂಡವರು!
ದಾಳಿ ನಡೆದ ಪ್ರದೇಶವು ಗಡಿ ನಿಯಂತ್ರಣ ರೇಖೆಯ ಭಿಂಬೇರ್ ಗಾಲಿಯಿಂದ 7 ಕಿ.ಮೀ. ದೂರದಲ್ಲಿದೆ. ಇಲ್ಲಿ ದಟ್ಟ ಅರಣ್ಯವಿದೆ. ದಾಳಿ ನಡೆಸಿದವರು ಒಂದು ವರ್ಷಕ್ಕೂ ಹೆಚ್ಚು ಕಾಲ ರಜೌರಿ ಮತ್ತು ಪೂಂಛ್ ನಲ್ಲಿ ಇದ್ದಾರೆ ಎಂದು ನಂಬಲಾಗಿದೆ, ಕಠಿಣ ಭೂ ಪ್ರದೇಶದ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ರಾಜೌರಿ ಮತ್ತು ಪೂಂಛ್ ಪ್ರದೇಶದಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ ಎಂದು ಮೂಲಗಳು ತಿಳಿಸಿವೆ.