ನವದೆಹಲಿ:ದೇಶಾದ್ಯಂತ ಕೋವಿಡ್ 19 ಸೋಂಕಿಗೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ರೆಮಿಡಿಸಿವಿರ್ ಲಸಿಕೆ ನೀಡುತ್ತಿದ್ದು, ಏತನ್ಮಧ್ಯೆ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ಕೋವಿಶೀಲ್ಡ್ ಮೊದಲ ಹಂತದ ಲಸಿಕೆ ತೆಗೆದುಕೊಂಡ ನಂತರ ಎರಡನೇ ಲಸಿಕೆಯನ್ನು ಎಷ್ಟು ದಿನಗಳ ನಂತರ ತೆಗೆದುಕೊಳ್ಳಬೇಕೆಂಬ ಜಿಜ್ಞಾಸೆಗೆ ಇದೀಗ ಕೇಂದ್ರ ಸರ್ಕಾರ ಗುರುವಾರ(ಮೇ 13) ಸ್ಪಷ್ಟ ಸಂದೇಶವನ್ನು ಹೊರಡಿಸಿದೆ.
ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ 19 ಚಿಕಿತ್ಸೆ: ಹಿಮಾಚಲ್ ಸರ್ಕಾರ ಘೋಷಣೆ
ಕೋವಿಡ್ 19 ಲಸಿಕೆ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅವಧಿಯನ್ನು 12ರಿಂದ 16ವಾರಗಳವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಸಮಿತಿ ಶಿಫಾರಸು ಮಾಡಿದೆ. ಆದರೆ ಭಾರತದಲ್ಲಿ ಬಳಕೆಯಲ್ಲಿರುವ ಎರಡನೇ ಲಸಿಕೆಯಾದ ಕೋವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಎರಡು ಡೋಸ್ ಗಳ ನಡುವಿನ ಅವಧಿಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆಯನ್ನು ಸೂಚಿಸಿಲ್ಲ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಗೆ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ ಸೀರಂ ಇನ್ಸ್ ಟಿಟ್ಯೂಟ್ ಹೆಚ್ಚಿನ ಪ್ರಮಾಣದ ಲಸಿಕೆ ಉತ್ಪಾದಿಸಲು ಹರಸಾಹಸಪಡುತ್ತಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಕೋವಿಶೀಲ್ಡ್ ಲಸಿಕೆ ಕೊರತೆ ಎದುರಿಸುವಂತಾಗಿದೆ.
ಕೋವಿಶೀಲ್ಡ್ ಎರಡು ಡೋಸ್ ನಡುವಿನ ಅಂತರವನ್ನು ಕೇಂದ್ರ ಸರ್ಕಾರ ಇದೀಗ ಎರಡನೇ ಬಾರಿ ಹೆಚ್ಚಳ ಮಾಡಿದಂತಾಗಿದೆ. ಈ ಮೊದಲು ಕೋವಿಶೀಲ್ಡ್ ಲಸಿಕೆಯ ಉತ್ತಮ ಫಲಿತಾಂಶಕ್ಕಾಗಿ ಮೊದಲ ಡೋಸ್ ನ ನಂತರ ಎರಡನೇ ಡೋಸ್ ಗೆ 28ದಿನಗಳಿಂದ ಆರರಿಂದ ಎಂಟು ವಾರಗಳವರೆಗೆ ಹೆಚ್ಚಿಸುವಂತೆ ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿತ್ತು.