Advertisement

ಶಾಲೆಗೆ ಹೋಗಲು ನಿತ್ಯ 11 ಕಿ.ಮೀ.ನಡಿಗೆ

02:59 PM Jul 05, 2019 | Suhan S |

ಚಿಕ್ಕನಾಯಕನಹಳ್ಳಿ: ತಾಲೂಕಿನ ಹೊನ್ನೆಬಾಗಿ ಗ್ರಾಪಂ ವ್ಯಾಪ್ತಿಯಲ್ಲಿನ ಮೈನಿಂಗ್‌ ಕ್ಯಾಂಪ್‌ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿನ ವಿದ್ಯಾರ್ಥಿಗಳು ದಿನನಿತ್ಯ 11 ಕಿ.ಮೀ ಕಾಲು ನಡಿಗೆಯಲ್ಲಿ ನಡೆದುಕೊಂಡು ಶಾಲೆಗೆ ಬಂದು ಹೋಗುವ ಸಂಕಷ್ಟವಿದ್ದು ಯಾವ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.

Advertisement

ಶಿಕ್ಷಣ ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತೆ ಮಾಡಲು ನೂರಾರು ಯೋಜನೆ ರೂಪಿಸಿರುವ ಸರ್ಕಾರದ ಯೋಜನೆಗಳು ಕೆಲ ಭಾಗದ ಮಕ್ಕಳಿಗೆ ಸಿಗದೇ. ಶಿಕ್ಷಣವೇ ಒಂದು ರೀತಿಯಲ್ಲಿ ಶಿಕ್ಷೆಯಾ ದಂತಾಗಿದೆ. ತಾಲೂಕಿನ ಗಣಿಬಾಧಿತ ಪ್ರದೇಶವಾಗಿ ರುವ ಸಾರಂಗಪಾಣಿ ಮೈನ್ಸ್‌ ಬಳಿಯ ಗೊಲ್ಲರ ಹಟ್ಟಿಯಲ್ಲಿ ಸುಮಾರು 60 ಮನೆಗಳಿದ್ದು ಸುಮಾರು 300 ಮಂದಿ ವಾಸಮಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರೇ ಭಯ ಕಾಡುತ್ತದೆ. ಶಾಲೆಗೆ ಹೋದ ಮಕ್ಕಳು ಮನೆಗೆ ಬರುವ ವರೆಗೂ ಮಕ್ಕಳ ತಾಯಂದಿರಿಗೆ ಆತಂಕ ತಪ್ಪಿದ್ದಲ್ಲ.

ಇಲ್ಲಿನ ಮಕ್ಕಳು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಲು ದಿನನಿತ್ಯ 11 ಕಿ.ಮೀ ನಡೆದುಕೊಂಡೇ ಚಿಕ್ಕನಾಯಕನ ಹಳ್ಳಿ ಪಟ್ಟಣದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಬರಬೇಕಾಗಿದೆ. ಯಾವುದೇ ಸಾರಿಗೆ ವ್ಯವಸ್ಥೆಯಾಗಲಿ ಇಲ್ಲವಾಗಿದೆ. ಆದರೂ ಶಿಕ್ಷಣ ಕಲಿಯಬೇಕು ಎಂಬ ಉದ್ದೇಶದಿಂದ ದಿನನಿತ್ಯ ಸುಮಾರು 10 ಮಂದಿ ವಿದ್ಯಾರ್ಥಿಗಳು ಅದರಲ್ಲು ಹೆಣ್ಣು ಮಕ್ಕಳು ತೋಟಗಳ ಸಾಲಿನಲ್ಲಿ ಶಾಲೆಗೆ ಬಂದು ಹೋಗುತ್ತಿದ್ದಾರೆ.

ಹಿನ್ನಲೆ: ಕಳೆದ ಹಲವು ವರ್ಷಗಳ ಹಿಂದ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡಲು ತಮಿಳುನಾಡಿನ ನೂರಾರು ಕಾರ್ಮಿಕರು ಹೊನ್ನಬಾಗಿ ಗ್ರಾಪಂ ವ್ಯಾಪ್ತಿ ಯಲ್ಲಿ ಬಂದು ನೆಲೆ ನಿಂತಿದ್ದರು. ತಾಲೂಕಿನಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಮಕ್ಕಳಿಗೆ 7ನೇ ತರಗತಿವರೆಗೆ ಗ್ರಾಪಂ ವ್ಯಾಪ್ತಿಯಲ್ಲಿಯೇ ಶಾಲೆ ಇದ್ದು. ಹೈಸ್ಕೂಲ್ ಶಿಕ್ಷಣ ಪಡೆಯಲು ಚಿಕ್ಕನಾಯಕನಹಳ್ಳಿಗೆ ಬರಬೇಕಾ ಗಿದೆ. ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೇ ದಿನನಿತ್ಯ ಕಾಲು ನಡಿಗೆಯಲ್ಲಿ ಶಾಲೆಗೆ ಬಂದು ಹೋಗಬೇಕಿದೆ.

ಅಪಾಯ ಕಟ್ಟಿಟ್ಟ ಬುತ್ತಿ: ದಿನನಿತ್ಯ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದರೇ ಪರಿಚಯಸ್ಥರ ಬೈಕ್‌ಗಳು ಅಥವಾ ಊರಿಗೆ ಬಂದ ಆಟೋಗಳಲ್ಲಿ ಬರ ಬೇಕು. ಸಮಯಕ್ಕೆ ವಾಹನಗಳು ಸಿಗದಿದ್ದಾಗ. ಗುಡ್ಡ ಪ್ರದೇಶದಲ್ಲಿ ನಡೆದುಕೊಂಡು ಬರಬೇಕಾಗು ತ್ತದೆ. ಈ ಪ್ರದೇಶದಲ್ಲಿ ಚಿರತೆ, ಕರಡಿಗಳ ಸಂಚಾರವಿದ್ದು ವಿದ್ಯಾ ರ್ಥಿಗಳು ಸಂಜೆ ಸಮಯದಲ್ಲಿ ಬರುವಾಗ ಕಾಡು ಪ್ರಾಣಿಗಳ ದಾಳಿಯಾಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಶಿಕ್ಷಣ ಪಡೆಯಬೇಕು ಎಂಬ ಆಸೆಯಿಂದ ಕಷ್ಟ ಮರೆತು ವಿದ್ಯಾರ್ಥಿಗಳು ದಿನ ನಿತ್ಯ ನಡೆದು ಕೊಂಡು ಶಾಲೆಗೆ ಬರುತ್ತಿದ್ದಾರೆ. ಸಂಬಂಧಪಟ್ಟ ಅಧಿ ಕಾರಿಗಳು ಹಾಗೂ ಜನಪ್ರತಿನಿಧಿಗಳು ಗಣಿಬಾಧಿತ ಪ್ರದೇಶವಾಗಿ ರುವ ಹೊನ್ನೆಬಾಗಿ ಗ್ರಾಪಂ ಭಾಗಕ್ಕೆ ಸರ್ಕಾರಿ ಬಸ್‌ಗಳ ಸೌಕರ್ಯ ಮಾಡಿದರೆ ಈ ವಿದ್ಯಾರ್ಥಿಗಳ ಜೊತೆಗೆ ಊರಿನ ಜನರಿಗೂ ಅನು ಕೂಲವಾಗುತ್ತದೆ. ಶಿಕ್ಷಣವು ಶಿಕ್ಷೆಯಾಗದೇ ಬಡ ಕೂಲಿಗಾರರ ಮಕ್ಕಳಿಗೆ ಪೂರಕವಾಗಬೇಕಿದೆ. ತಾಲೂಕು ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ವಿದ್ಯಾಸಕ್ತಿ ಹೊಂದಿರುವ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡಬೇಕು ಎಂಬುದು ಇಲ್ಲಿನ ನಿವಾಸಿಗಳ ಒತ್ತಾಸೆಯಾಗಿದೆ.

Advertisement

 

● ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next