Advertisement

ನಮ್ಮ ಶಾಲೆ ನಮ್ಮ ಹೆಮ್ಮೆ: ಪಠೇಲರು ಆರಂಭಿಸಿದ ಶಾಲೆಗೆ ಈಗ 117ರ ಹರೆಯ

01:13 PM Nov 09, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1902 ಶಾಲೆ ಆರಂಭ
1906ರಲ್ಲಿ ತಾಲೂಕು ಬೋರ್ಡ್‌ಗೆ ಹಸ್ತಾಂತರ

ಸುಳ್ಯ: ಊರಿನ ಏಳು ಮಕ್ಕಳಿಗೋಸ್ಕರ ಪಠೇಲರು ಸ್ವಂತ ಕಟ್ಟಡದಲ್ಲಿ ಆರಂಭಿಸಿದ್ದ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 117ರ ಹರೆಯ.

ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅನಕ್ಷರತೆ ಎಂಬ ಸಾಮಾಜಿಕ ಪಿಡುಗು ದೂರವಾಗಿಸಲು ಹಳ್ಳಿ-ಹಳ್ಳಿಗಳಲ್ಲಿ ಶಾಲೆ ಆರಂಭಿಸಲು ದೇಶದೆಲ್ಲೆಡೆ ಪ್ರೋತ್ಸಾಹ ನೀಡಲಾಗಿತ್ತು. ಈ ಸಂದರ್ಭ ಐವರ್ನಾಡಿನಲ್ಲಿ 1902ರಲ್ಲಿ ಊರಿನ 7 ಮಕ್ಕಳಿಗೋಸ್ಕರ ಪಠೇಲ ಬೀರಣ್ಣ ಗೌಡ ಸ್ವಂತ ಕಟ್ಟಡದಲ್ಲಿ ಶಾಲೆ ತೆರೆದರು. ಮಡ್ತಿಲ ಬೆಳ್ಯಪ್ಪ ಗೌಡ ಅವರ ಸಹಕಾರ ಪಡೆದು ನಾಲ್ಕು ವರ್ಷಗಳ ಕಾಲ ಶಾಲೆ ನಡೆಯಿತು. 1906ರಲ್ಲಿ ಈ ಶಾಲೆಯನ್ನು ಪುತ್ತೂರು ತಾಲೂಕು ಬೋರ್ಡ್‌ ಸುಪರ್ದಿಗೆ ಒಪ್ಪಿಸಲಾಯಿತು.

ಆರಂಭದ ದಿನಗಳು
ಆರಂಭದ ವರ್ಷದಲ್ಲಿ 7 ವಿದ್ಯಾರ್ಥಿಗಳಿದ್ದರು. 1ರಿಂದ 4ನೇ ತರಗತಿ ತನಕ ಇತ್ತು. ಅಧಿಕೃತವಾಗಿ ಸರಕಾರಿ ಶಾಲೆಯಾಗಿ 1906ರಿಂದ ಆರಂಭಗೊಂಡಲ್ಲಿಂದ 1961ರ ತನಕ 1ರಿಂದ 5ರ ತನಕ ತರಗತಿಗಳಿದ್ದವು. 1962ರಲ್ಲಿ ಊರ ಪ್ರಮುಖರಾದ ಗಣಪಯ್ಯ ಮಾಸ್ತರ್‌, ಚಿನ್ನಪ್ಪ ಮಾಸ್ತರ್‌, ಐತ್ತಪ್ಪ ಮಾಸ್ತರ್‌ ಅವರು 6ನೇ ತರಗತಿ ಪ್ರಾರಂಭಕ್ಕೆ ಜಿಲ್ಲಾ ಬೋರ್ಡ್‌ನಿಂದ ಆದೇಶ ಪಡೆದುಕೊಂಡರು. ಬಳಿಕ ಎನ್‌.ಎಂ. ಬಾಲಕೃಷ್ಣ ಅವರ ಮುಂದಾಳತ್ವದಲ್ಲಿ ಪ್ರಯತ್ನ ಫಲಪ್ರದವಾಯಿತು. ಬಳಿಕ ಈ ಶಾಲೆ ಹಿ.ಪ್ರಾ.ಆಗಿ ಮೇಲ್ದರ್ಜೆಗೇರಿತು.

Advertisement

ಮೊದಲ ಹೆಡ್‌ಮಾಸ್ಟರ್‌
1906ರಲ್ಲಿ ಮೊದಲ ಮುಖ್ಯ ಅಧ್ಯಾಪಕರಾಗಿ ಬಿ. ಸಾಂತಪ್ಪಯ್ಯ (ಬೇಕಲ) ಅವರು ಕರ್ತವ್ಯ ನಿರ್ವಹಿಸಿದ್ದರು. 1920ರ ತನಕ ಅವರೇ ಕರ್ತವ್ಯ ನಿರ್ವಹಿಸಿರುವ ಕುರಿತು ದಾಖಲೆಗಳಿವೆ. ಅನಂತರ ಎಂ. ಬಟ್ಯಪ್ಪ ಗೌಡ ಮಡ್ತಿಲ, ದೇರಣ್ಣ ಕುಧ್ಕುಳಿ, ಶ್ರೀನಿವಾಸ ರಾವ್‌ ಹೀಗೆ ಹಲವರು ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರ ಪೈಕಿ ಬಿ. ದೇವಪ್ಪ ರೈ, ಪಾಳೇರು ಹೊನ್ನಪ್ಪ, ಗುಡ್ಡೆಮನೆ ವೆಂಕಪ್ಪ, ಪಿ. ರಾಮಯ್ಯ, ಕೆ. ಸುಬ್ಬಪ್ಪ ಸಹಿತ 75ಕ್ಕೂ ಅಧಿಕ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ವ್ಯಾಪ್ತಿ
ದೇವರಕಾನ, ದೇರಾಜೆ, ನಿಡುಬೆ, ಬಾಂಜಿಕೋಡಿ, ಐವರ್ನಾಡು ಸಹಿತ ಇಡೀ ಗ್ರಾಮಕ್ಕೆ ಇದೊಂದೇ ಶಾಲೆಯಾಗಿತ್ತು. ಹೀಗಾಗಿ ಆ ಕಾಲದಲ್ಲಿ ಶಾಲೆಯಲ್ಲಿ ಒಟ್ಟು 300ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಖ್ಯೆ ಇತ್ತು.

ಶಾಲೆಯ ಆಸ್ತಿ, ಮೂಲ ಸೌಕರ್ಯ
ಒಟ್ಟು 2.30 ಎಕ್ರೆ ಜಾಗವಿದೆ. 40ಕ್ಕೂ ಅಧಿಕ ತೆಂಗಿನ ಮರ, ಅಕ್ಷರ ಕೈತೋಟಗಳಿವೆ. ಶಿಕ್ಷಕ ದಾನಿಗಳ ಸಹಕಾರದಿಂದ ನಿರ್ಮಿಸಿದ ಉಯ್ನಾಲೆ, ಜೋಕಾಲಿ, ಜಾರುಬಂಡಿ ಮೊದಲಾದವುಗಳಿವೆ. ಬಣ್ಣ ಬಣ್ಣದ ಹೂದೋಟವಿದೆ. ಕುಡಿಯುವ ನೀರಿಗೆ ಕೊಳವೆಬಾವಿ, ಬಾವಿ ಇವೆ. ಈ ಶಾಲಾ ವಿದ್ಯಾರ್ಥಿಗಳು ಸಂಪೂರ್ಣ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಶತಮಾನೋತ್ಸವ ಸಂದರ್ಭ ಹಳೆ ಶಾಲೆ ಪಕ್ಕ ಹೊಸ ಕಟ್ಟಡ, ರಂಗಮಂದಿರ ನಿರ್ಮಾಣವಾಗಿದೆ.

ಈ ಪ್ರದೇಶದಲ್ಲಿ ಈಗಿರುವ ಶಾಲೆಗಳು
ಆರಂಭದಲ್ಲಿ ಇಡೀ ಗ್ರಾಮದಲ್ಲಿ ಐವರ್ನಾಡು ಪ್ರಾಥಮಿಕ ಶಾಲೆ ಮಾತ್ರ ಇತ್ತು. ಪ್ರಸ್ತುತ ದೇವರಕಾನ, ದೇರಾಜೆ, ನಿಡುಬೆ, ಬಾಂಜಿಕೋಡಿಯಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಐವರ್ನಾಡಿನಲ್ಲಿ ಹೈಸ್ಕೂಲು ಮತ್ತು ಪ.ಪೂ. ಕಾಲೇಜು ಇವೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ
ಈ ಶಾಲೆ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ತೋರಿದೆ. ಕಬಡ್ಡಿ, ಖೋ-ಖೋ ಪಂದ್ಯಾಟದಲ್ಲಿ ತಾಲೂಕು, ಜಿಲ್ಲೆ, ವಿಭಾಗೀಯ ಮಟ್ಟದವನ್ನು ಪ್ರತಿನಿಧಿಸಿದೆ. ಇಲ್ಲಿನ ನೂರಾರು ವಿದ್ಯಾರ್ಥಿಗಳು ಹಲವು ಕೂಟಗಳಲ್ಲಿ ಬಹುಮಾನ ಗಳಿಸಿದ್ದಾರೆ.

ಶಾಲೆಯಲ್ಲಿ ಕಲಿತ ಸಾಧಕರು
ಮಡ್ತಿಲ ಪುರುಷೋತ್ತಮ ಗೌಡ, ಪಾಲೆಪ್ಪಾಡಿ ಗಣಪಯ್ಯ ಭಟ್‌, ರಾಮಣ್ಣ ನಾೖಕ್‌ ಉದ್ದಂಪಾಡಿ, ಕೃಷ್ಣಪ್ಪ ಗೌಡ ಮಡ್ತಿಲ ಹೀಗೆ ಪಟ್ಟಿ ಬೆಳೆಯುತ್ತದೆ. ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಇವರೆಲ್ಲ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಮಕ್ಕಳ ಸಂಖ್ಯೆ ಇದೆ. ಹೆಚ್ಚಿನ ಮೂಲ ಸೌಕರ್ಯಗಳು ಇವೆ. ಆವರಣಗೋಡೆ, ತಡೆಗೋಡೆ, ಮೈದಾನ ಸಮತಟ್ಟು ಮಾಡುವ ಇರಾದೆ ಹೊಂದಿದ್ದೇವೆ.
-ನಳಿನಾಕ್ಷಿ ಎ., ಪ್ರಭಾರ ಮುಖ್ಯಗುರು

1971ರಲ್ಲಿ ನಾನು ಆ ಶಾಲೆ ವಿದ್ಯಾರ್ಥಿ. ಆಗ 300ಕ್ಕೂ ಅಧಿಕ ಮಕ್ಕಳು ಅಲ್ಲಿದ್ದರು. ಸುತ್ತಮುತ್ತಲಿನ ನಾಲ್ಕು ಕಿರಿಯ ಪ್ರಾಥಮಿಕ ಶಾಲೆಗಳನ್ನು ಸೇರಿಸಿ ಐವರ್ನಾಡು ಶಾಲೆಯಲ್ಲಿ ಸಂಯುಕ್ತ ವಾರ್ಷಿಕೋತ್ಸವ ಆಚರಿಸುತ್ತಿದ್ದರು. 2016ರಲ್ಲಿ ಶಾಲಾ ಶತಮಾನೋತ್ಸವ ಸಂದರ್ಭ ಅದರ ಅಧ್ಯಕ್ಷನಾಗಿ ಊರ ಪರವೂರ, ಸರಕಾರದ ಸಹಾಯ ಪಡೆದು ಎರಡು ಕೊಠಡಿ, ರಂಗಮಂದಿರ ನಿರ್ಮಿಸಿದ್ದೇವೆ.
-ದಿನೇಶ್‌ ಮಡ್ತಿಲ, ಹಳೆ ವಿದ್ಯಾರ್ಥಿ ಮತ್ತು ಶತಮಾನೋತ್ಸವ ಸಮಿತಿ ಅಧ್ಯಕ್ಷ

-  ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next