Advertisement

ರಾಜ್ಯಾದ್ಯಂತ 1125 ಬಸ್‌ ಸೇವೆ ರದ್ದು, ಕೆಎಸ್‌ಆರ್‌ಟಿಸಿಗೆ 6.69 ಕೋಟಿ ನಷ್ಟ

12:56 AM Mar 21, 2020 | sudhir |

ಬೆಂಗಳೂರು: ಕೋವಿಡ್ 19 ಹಿನ್ನಲೆ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದ್ದು, ಬುಧವಾರ ರಾಜ್ಯಾದ್ಯಂತ 1125 ಬಸ್‌ಗಳ ಸೇವೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರದ್ದುಗೊಳಿಸಿದೆ. ಇದರಿಂದ ನಿಗಮಕ್ಕೆ ಒಟ್ಟಾರೆ 6.69 ರೂ. ನಷ್ಟ ಉಂಟಾಗಿದೆ.

Advertisement

ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳ, ಚೆನ್ನೈ, ಮುಂಬೈ, ಪುಣೆ, ಶಿರಡಿ, ಕುಕ್ಕೆ, ಧರ್ಮಸ್ಥಳ, ಹೈದರಾಬಾದ್‌, ತಮಿಳುನಾಡಿಗೆ ಸಂಚರಿಸುತ್ತಿದ್ದ ಬಸ್‌ಗಳ ಸೇವೆಯನ್ನು ರದ್ದುಗೊಳಿಸಿದೆ.

ಕೆಎಸ್‌ಆರ್‌ಟಿಸಿ ಎಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಹೊದಿಕೆಯನ್ನು ಬುಧವಾರದಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ನಿಗಮವು ಮೈಸೂರಿನಲ್ಲಿರುವ ಇನ್ಫೋಸೀಸ್‌ ತರಬೇತಿ ಕೇಂದ್ರದಲ್ಲಿ 5 ಮುಂಗಡ ಬುಕ್ಕಿಂಗ್‌ ಕೇಂದ್ರಗಳನ್ನು ತೆರದಿದ್ದು, ತರಬೇತಿ ಪಡೆಯುತ್ತಿರುವ 434 ಮಂದಿಯನ್ನು 20 ಬಸ್‌ಗಳಲ್ಲಿ ಚೆನ್ನೈ, ಹೈದರಾಬಾದ್‌, ಕೊಟ್ಟಾಯಂ, ಕೊಯಮತ್ತೂರು, ಮಧುರೈ, ಮಂಗಳೂರಿಗೆ ಕಳುಹಿಸಲಾಯಿತು.

ಪರಿಣಾಮಕಾರಿ ಸ್ವಚ್ಛತಾ ಕಾರ್ಯ ಮಾಡಲು ಸೂಚನೆ: ಬಸ್‌ಗಳ ಒಳ ಹಾಗೂ ಹೊರಭಾಗಗಳು, ಬಸ್‌ ನಿಲ್ದಾಣಗಳು, ವಿಶ್ರಾಂತಿ ಕೊಠಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಬಸ್‌ಗಳ ಒಳಭಾಗವನ್ನು ರಾಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಬೇಕು. ಕೆಎಸ್‌ಆರ್‌ಟಿಸಿಯ ವೋಲ್ವೋ ಬಸ್‌ ಹಾಗೂ ವಿಮಾನ ನಿಲ್ದಾಣದಿಂದ ಸೇವೆ ನೀಡುವ ಫ್ಲೈ ಬಸ್‌ಗಳನ್ನು ಆ್ಯಂಟಿ ಬ್ಯಾಕ್ಟೀರಿಯಾ ಕೆಮಿಕಲ್‌ ಬಳಸಿ ಫ್ಯೂಮಿಗೇಷನ್‌ ಮಾಡಬೇಕು. ಸಾಂಕ್ರಾಮಿಕ ರೋಗ ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಚಾಲನಾ ಸಿಬ್ಬಂದಿ ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕೈಯಿಂದ ಅಡ್ಡವಾಗಿ ಮುಚ್ಚಿಕೊಳ್ಳಬೇಕು. ಇಲ್ಲವೇ ಕರವಸ್ತ್ರ ಬಳಸಬೇಕು. ಶೀತ ಅಥವಾ ಜ್ವರದಂತಹ ರೋಗ ಲಕ್ಷಣವಿರುವ ವ್ಯಕ್ತಿಗಳ ಸಂಪರ್ಕದಿಂದ ದೂರವಿರಬೇಕು. ಎಸಿ ಬಸ್‌ಗಳು ತಾಪಮಾನವನ್ನು 24-25ಸೆಂಟಿಗ್ರೇಡ್‌ಗೆ ನಿಗದಿಗೊಳಿಸಬೇಕು. ಬಸ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ವಿಭಾಗದ ಘಟಕಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ,ಜಿಲ್ಲಾ ಆರೋಗ್ಯ ಇಲಾಖೆಯವರ ಸಹಯೋಗದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಚಾಲಕ, ನಿರ್ವಾಹಕರ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ದಿನಾಂಕ ಮಾ. 30ರವರೆಗೆ ವಿಸ್ತರಿಸಲಾಗಿದೆ ನಿಗಮದ ಅಧಿಕಾರಿ ತಿಳಿಸಿದ್ದಾರೆ.

Advertisement

ಥರ್ಮಲ್‌ ಸ್ಕ್ರೀನಿಂಗ್‌ ಮಿಷನ್‌ ಮೂಲಕ ಪರೀಕ್ಷೆ
ಜಿಲ್ಲಾ ಆರೋಗ್ಯ ಇಲಾಖೆಯಿಂದ ಬುಧವಾರ ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಿಷನ್‌ ಮೂಲಕ ಜನರ ದೇಹದ ತಾಪಮಾನ ಮಾಡಲಾಯಿತು. ಮುಖ್ಯ ಬಸ್‌ ನಿಲ್ದಾಣಗಳಲ್ಲಿ ಜನರನ್ನು ಪರೀಕ್ಷಿಸಲು ಥರ್ಮಲ್‌ ಸ್ಕ್ರೀನಿಂಗ್‌ ಯಂತ್ರೋಪಕರಣ ನೀಡುವಂತೆ ನಿಗಮ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ.

ಕಚೇರಿ ವೇಳೆ ಚಹಾಕ್ಕೆ ಹೊರಹೋಗುವುದು ನಿಷೇಧ
ಕೊರೊನಾ ವೈರಸ್‌ ಮುಂಜಾಗ್ರತಾ ಕ್ರಮವಾಗಿ ನಿಗಮದ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಟೀ, ಕಾಫಿ ಕುಡಿಯಲು ಕಚೇರಿ ಸಮಯದಲ್ಲಿ ಹೊರಹೋಗುವುದನ್ನು ನಿಷೇಧಿಸಿ ನಿಗಮದ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ನಿರ್ಣಾಯ ಕೈಗೊಳ್ಳಲಾಗಿದೆ. ಕಚೇರಿ ಒಳಗೆ ಟೀ, ಕಾಫಿಯನ್ನು ತರುವಂತಿಲ್ಲ ಹಾಗೂ ಸಿದ್ದಪಡಿಸುವಂತಿಲ್ಲ ಎಂದು ಮುಂದಿನ ಆದೇಶದವರಗೂ ನಿಷೇಧಿಸಲಾಗಿದೆ. ನಿಗಮದ ಕಚೇರಿಗಳಲ್ಲಿ ಸಾರ್ವಜನಿಕ ಭೇಟಿಗಳನ್ನು ರದ್ದುಪಡಿಸಿದ್ದು, ಅತೀ ಜರೂರು ಕಾರಣಗಳಿಗೆ ಮಾತ್ರ ಭೇಟಿಯನ್ನು ಮಧ್ಯಾಹ್ನ 3 ರಿಂದ 4ಕ್ಕೆ ನಿಗದಿ ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next