Advertisement

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

09:59 AM Dec 13, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1908 ಶಾಲೆ ಸ್ಥಾಪನೆ
ಪ್ರಸ್ತುತ 360 ವಿದ್ಯಾರ್ಥಿಗಳು

ಹೆಬ್ರಿ : ಪ್ರಸಿದ್ಧ ಆಲಡೆ ಕ್ಷೇತ್ರಗಳಲ್ಲಿ ಒಂದಾದ ಹಿರಿಯಡಕ ವೀರಭದ್ರ ದೇವಸ್ಥಾನ ಸಮೀಪವಿರುವ ಶತಮಾನ ಕಂಡು ಮುನ್ನಡೆಯುತ್ತಿರುವ ಉಡುಪಿ ಜಿಲ್ಲೆಯ ಹಿರಿಯಡಕ ಸ.ಹಿ.ಪ್ರಾ. ಶಾಲೆಗೆ 111 ವರ್ಷವಾಗಿದೆ. ಕಳೆದ 1ವರ್ಷದಿಂದ ಹಿರಿಯಡಕ ಸ.ಹಿ.ಪ್ರಾ.ಶಾಲೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆಗೊಂಡಿದೆ. ಅನಂತಪ್ಪ ಕಿಣಿ,ಶ್ರೀನಿವಾಸ ಭಟ್‌, ಪಾಂಗಾಳ ಮುಕುಂದ ಭಟ್‌,ಬೆಳ್ಳೆ ರಾಜಾಚಾರ್ಯ,ಗೋವಿಂದ ನಾಯ್ಕ ಮೊದಲಾದವರು ಶಾಲೆಯ ಅಭಿವೃದ್ಧಿಗೆ ಕಾರಣರಾದವರು. ಉತ್ತಮ ಶಿಕ್ಷಣದಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವೀರ ಯೋಧರನ್ನು ನೀಡಿದ ಹೆಗ್ಗಳಿಕೆ ಈ ಶಾಲೆಗೆ ಇದೆ. ಗುಡ್ಡೆಯಂಗಡಿ , ಪಡುಅಂಜಾರು , ಪೆರ್ಣಂಕಿಲ , ಪುತ್ತಿಗೆ, ಪೆರ್ಡೂರು, ಕೊಡಿಬೆಟ್ಟು , ಆತ್ರಾಡಿ ಸುತ್ತಮುತ್ತಲಿನ ಪ್ರದೇಶಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದು ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಿರುವುದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

ಮೂಲ ಸೌಕರ್ಯ
1908ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷದಲ್ಲಿದ್ದುದನ್ನು ಇಲ್ಲಿನ ಶಿಕ್ಷಣ ಅಭಿಮಾನಿಗಳು ನೆನಪಿಸುತ್ತಾರೆ. ಸುಮಾರು 16 ಸೆಂಟ್ಸ್‌ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ತರಗತಿ ಕೋಣೆ, ಕಂಪ್ಯೂಟರ್‌ ಕೊಠಡಿ, ಶೌಚಾಲಯ, ನಲಿಕಲಿ ಕೊಠಡಿ, ಬಾವಿ , ಅಕ್ಷರ ದಾಸೋಹ ಮೊದಲಾದ ಮೂಲ ಸೌಕರ್ಯದೊಂದಿಗೆ ದಾನಿಗಳ ನೆರವಿನೊಂದಿಗೆ ಪುನರುಜ್ಜೀವನ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಎಲ್‌ಕೆಜಿ ಶಿಕ್ಷಣ ಆರಂಭಿಸಿದ್ದರಿಂದ ಇದೀಗ ತರಗತಿ ಕೋಣೆಗಳ ಕೊರತೆ ಕಾಣುತ್ತಿದೆ. ಶಾಲೆಯ ವಠಾರದಲ್ಲೆ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲದೆ ಹೈಸ್ಕೂಲ್‌ ಮೈದಾನವನ್ನು ಬಳಸಬೇಕಾಗಿದೆ.

ಮುಖ್ಯ ಶಿಕ್ಷಕರು ಸೇರಿದಂತೆ 9 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಹಿರಿಯಡಕ ಸರಕಾರಿ ಶಾಲೆಯಲ್ಲಿ ದಾಖಲೆ ಪ್ರಮಾಣದ ವಿದ್ಯಾರ್ಥಿಗಳಿರುವುದು ಇಲ್ಲಿಯ ಹೆಮ್ಮೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಏರುತ್ತಲಿದ್ದು ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ 360 ವಿದ್ಯಾರ್ಥಿಗಳು ಹಿರಿಯಡಕ ಪಬ್ಲಿಕ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್‌ ನಾಯಕ್‌ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್‌ ರಾವ್‌ ಸೇರಿದಂತೆ ದಾನಿಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

Advertisement

ಸಾಧಕ ಹಳೆ ವಿದ್ಯಾರ್ಥಿಗಳು
ಮದ್ದಲೆ ಮಾಂತ್ರಿಕನೆಂದು ಹೆಸರು ಪಡೆದ ಹಿರಿಯಡಕ ಮದ್ದಳೆ ಗೋಪಾಲ್‌ ರಾವ್‌ , ಹಿರಿಯಡಕ ಮುರಳೀಧರ್‌ ಉಪಾಧ್ಯಾಯ, ಉದ್ಯಮಿ ರೋಹಿದಾಸ್‌ ಪೈ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಹಿರಿಯಡಕ ದಿ| ನಾರಾಯಣ ರಾಯರು, ದಿ| ದೇವರಾಯ ಭಂಡಾರ್‌ಕರ್‌ ಹಾಗೂ ಅಮೆರಿಕಾದ ಪ್ರಸಿದ್ಧ ವೈದ್ಯೆ ಡಾ| ಶಶಿರೇಖಾ ಶೆಟ್ಟಿ, ಇಂಜಿನಿಯರ್‌ ಅಶೋಕ್‌ ಕಾಮತ್‌ ಮತ್ತು ಯಶಸ್ವಿ ಉದ್ಯಮಿಗಳು ಹಾಗೂ ವೀರ ಯೋಧರನ್ನು ಈ ಶಾಲೆ ಸಮಾಜಕ್ಕೆ ನೀಡಿದೆ.

ಸರಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಶಾಲೆ ಉತ್ತಮವಾಗಿ ಮುಂದುವರೆಯುತ್ತಿದ್ದು , 15 ಕಿ.ಮೀ.ವ್ಯಾಪ್ತಿಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಪಠ್ಯೇತರ ಚಟುವಟಿಕೆಗ‌ಳನ್ನು ಈ ಶಾಲೆ ಅಳವಡಿಸಿಕೊಂಡಿದೆ,
-ಜಯಲಕ್ಷ್ಮೀ, ಪ್ರಭಾರ ಮುಖ್ಯ ಶಿಕ್ಷಕಿ , ಸ.ಹಿ.ಪ್ರಾ.ಶಾಲೆ, ಹಿರಿಯಡಕ

1930ರಲ್ಲಿ ನಾನು ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದೆ. ಆಗ ಗೋವಿಂದ ಎಂಬವರು ಇಲ್ಲಿನ ಮುಖ್ಯೋ ಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಶಿಕ್ಷಕ ವೃಂದದೊಂದಿಗೆ ಗುಣಮಟ್ಟದ ಬೋಧನೆ ಈ ಶಾಲೆಯ ವಿಶೇಷತೆಯಾಗಿದೆ. ಇಲ್ಲಿ ಕಲಿತಿದ್ದೇನೆ ಎನ್ನಲು ಹೆಮ್ಮೆಯಾಗುತ್ತಿದೆ..
-ಹಿರಿಯಡಕ ಗೋಪಾಲ್‌ ರಾವ್‌, ಮದ್ದಲೆ ಮಾಂತ್ರಿಕ

- ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next