ಪ್ಯಾರಿಸ್: ಪೊಲೀಸರ ಗುಂಡಿಗೆ 17 ವರ್ಷದ ಯುವಕ ಅಸುನೀಗಿದ ಬಳಿಕ ಫ್ರಾನ್ಸ್‌ನಲ್ಲಿ ಉಂಟಾಗಿರುವ ಕೋಲಾಹಲ, ಗಲಭೆ 4ನೇ ದಿನವೂ ಕಳೆದರೂ ತಣ್ಣಗಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.
ಫ್ರಾನ್ಸ್‌ನ ಬೀದಿ ಬೀದಿಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ದೇಶಾದ್ಯಂತ ಪೊಲೀಸರು ಹಿಂಸಾನಿರತರನ್ನು ಹೆಡೆ ಮುರಿಕಟ್ಟುತ್ತಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 1,100ಕ್ಕೆ ಏರಿಕೆಯಾಗಿದೆ ಎಂದು ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ.
ಈಗಾಗಲೇ 200ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಒಟ್ಟಾರೆ 45 ಸಾವಿರ ಭದ್ರತಾ ಪಡೆ ನಿಯೋಜಿಸಲಾಗಿದೆ.
ದೇಶದ 2ನೇ ಅತೀದೊಡ್ಡ ನಗರ ಮಾರ್ಸಿಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ.