ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಅಬ್ಬರ ಜೋರಾಗಿದ್ದು, ನಗರದ ಮಧ್ಯ ಭಾಗದಲ್ಲಿರುವ 11ರಿಂದ 20 ವಾರ್ಡುಗಳು ಈಗ ಚುನಾವಣೆಗೆ ಅಣಿಯಾಗಿವೆ. ಅಭಿವೃದ್ಧಿ ಹಿನ್ನೆಲೆ ಇಟ್ಟುಕೊಂಡೇ ಬೆಳೆಯುತ್ತಿರುವ ಈ ವಾರ್ಡುಗಳಲ್ಲಿ ಇನ್ನೂ ಅನೇಕ ಸಮಸ್ಯೆಗಳು ಮೆತ್ತಿಕೊಂಡಿವೆ. ಅರ್ಧ ಅಭಿವೃದ್ಧಿ, ಇನ್ನರ್ಧ ಖಾಲಿ ಖಾಲಿ ಇಲ್ಲಿನ ಪರಿಸ್ಥಿತಿ. ನಗರದ ಹೃದಯ ಭಾಗ ಎಂತಲೇ ಕರೆಯುವ ಈ ವಾರ್ಡುಗಳು ಇನ್ನೂ ಅಭಿವೃದ್ಧಿ ಪಥದತ್ತ ಸಾಗಿಲ್ಲ. ಬಹುತೇಕ ಕಡೆಗೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇವೆ. ಕೆಲವೊಂದು ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮಾಡಿದ್ದು ಬಿಟ್ಟರೆ ಇನ್ನೂ ಅನೇಕ ಸೌಕರ್ಯಗಳನ್ನು ಒದಗಿಸುವಲ್ಲಿ ಮಹಾನಗರ ಪಾಲಿಕೆ ಹಿಂದೆ ಬಿದ್ದಿದೆ.
11 ರಿಂದ 20 ವಾರ್ಡುಗಳಲ್ಲಿ ನಗರದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಮತದಾರರು ಇದ್ದಾರೆ. ಈ ಒಟ್ಟು ವಾರ್ಡುಗಳು ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ವ್ಯಾಪಿಸಿಕೊಂಡಿದ್ದು, ಕೆಲವೊಂದು ಪ್ರದೇಶಗಳು ಸ್ವಲ್ಪ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಇನ್ನೂ ಅನೇಕ ಕಡೆಗಳಲ್ಲಿ ಗಲ್ಲಿ-ಬೋಳುಗಳೇ ಇವೆ. ಇದರಲ್ಲಿಯ ಸುಮಾರು ಐದಾರು ವಾರ್ಡುಗಳು ಪಕ್ಕಾ ಮರಾಠಿ ಭಾಷಿಕರನ್ನೇ ಹೆಚ್ಚಾಗಿ ಹೊಂದಿವೆ. ಇಲ್ಲಿ ಒಂದು ಕಾಲದಲ್ಲಿ ಕನ್ನಡ-ಮರಾಠಿ ಭಾಷಾ ಜಗಳ ಆಗಾಗ ನಡೆದು ಇಡೀ ಬೆಳಗಾವಿಯ ಶಾಂತಿ-ಸುವ್ಯವಸ್ಥೆಯನ್ನೇ ಹಾಳುಗೆಡವುತ್ತಿದ್ದವು.
ಇತ್ತೀಚಿನ ಕೆಲವು ದಿನಗಳಲ್ಲಿ ಭಾಷಾ ವಿವಾದ ಕಿಡಿ ತುಸು ತಣ್ಣಗಾಗಿದ್ದು, ಅಮಾಯಕ ಜನರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವಾರ್ಡ್ ವ್ಯಾಪ್ತಿಗೆ ಬರುವ ಸದಾಶಿವ ನಗರ, ವಿಶ್ವೇಶ್ವರಯ್ಯ ನಗರಗಳು ಪಕ್ಕಾ ಅಭಿವೃದ್ಧಿ ಹೊಂದಿದ ವಾರ್ಡುಗಳು. ಜಿಲ್ಲಾಧಿಕಾರಿಗಳ ಬಂಗಲೆಯಿಂದ ಹಿಡಿದು ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು, ದೊಡ್ಡ ದೊಡ್ಡ ವ್ಯಾಪಾರಸ್ಥರು ಈ ಭಾಗದಲ್ಲಿ ವಾಸಿಸುತ್ತಾರೆ. ವಿಶ್ವೇಶ್ವರಯ್ಯ ನಗರದಕೆಲವೊಂದುಭಾಗದಲ್ಲಿಸಂಪೂರ್ಣ ಅಭಿವೃದ್ಧಿ ಇದೆ. ಪಕ್ಕಲ್ಲಿಯೇ ಇರುವ ಜಾಧವ ನಗರ ಕೂಡ ಇದಕ್ಕೆ ಹೊರತಾಗಿಲ್ಲ. ಬೆಳಗಾವಿ ನಗರದ ಅಭಿವೃದ್ಧಿ ವಿಷಯದಲ್ಲಿ ಈ ವಾರ್ಡುಗಳು ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡಿವೆ.
ಅಂದುಕೊಳ್ಳುವಷ್ಟು ಹಾಗೂ ಕಣ್ಣಿಗೆ ಕಾಣುವಷ್ಟು ಸಮಸ್ಯೆ ಏನೂ ಇಲ್ಲಿ ಇಲ್ಲ. ಆದರೆ, ಇನ್ನೂಕೆಲವೊಂದುಕಡೆಗೆ ರಸ್ತೆ ಸುಧಾರಣೆ ಆಗಬೇಕಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು. ಕ್ಲಬ್ ರಸ್ತೆಯಿಂದ ಹಿಡಿದು ಹಾಗೆಯೇ ಮುಂದೆ ಜ್ಯೋತಿ ಕಾಲೇಜುವರೆಗೆ ಸಾಗಿದರೆ ಅಲ್ಲಿ ಕೆಲ ತಿಂಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದೆ. ರಸ್ತೆ ಇಕ್ಕೆಲಗಳಲ್ಲಿ ಫುಟ್‌ಪಾತ್, ಚರಂಡಿ ನಿರ್ಮಾಣ ಸುಸಜ್ಜಿತವಾಗಿ ನಡೆದಿವೆ. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹೆ„ಮಾಸ್ಟ್ ದೀಪ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಬೇಕಾದ ಕೆಲಸಗಳು ಭರದಿಂದ ಸಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಇವು ಮುಕ್ತಾಯಗೊಳ್ಳಲಿವೆ.