ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ 11 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಜಿಲ್ಲೆಯಲ್ಲಿ 19 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 20 ದೃಢೀಕೃತ ಪ್ರಕರಣಗಳಾಗಿವೆ.
ಚಾಮರಾಜನಗರದ ಭ್ರಮರಾಂಬ ಬಡಾವಣೆಯ ನಿವಾಸಿ 35 ವರ್ಷದ ಸೆಸ್‌ಕ್ ಸಿಬ್ಬಂದಿ, ಬೆಂಗಳೂರಿಗೆ ಪ್ರಯಾಣಿಸಿದ್ದ ಕೊಳ್ಳೇಗಾಲದ 35 ವರ್ಷದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಇಬ್ಬರನ್ನು ಹೊರತುಪಡಿಸಿದರೆ, ಉಳಿದ ಪ್ರಕರಣಗಳು ಗುಂಡ್ಲುಪೇಟೆ ಪಟ್ಟಣದವಾಗಿವೆ. ತಮಿಳುನಾಡಿಗೆ ಪ್ರಯಾಣಿಸಿದ್ದ 43 ವರ್ಷದ ಗುಂಡ್ಲುಪೇಟೆಯ ಚಾಲಕ ಹಾಗೂ ತಮಿಳುನಾಡಿಗೆ ಪ್ರಯಾಣಿಸಿದ್ದ ಗುಂಡ್ಲುಪೇಟೆಯ 24 ವರ್ಷದ ಯುವಕನನ್ನು ಬಿಟ್ಟು ಇನ್ನುಳಿದ 7 ಸೋಂಕಿತರು ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ಕಂಟೈನ್‌ಮೆಂಟ್ ವಲಯದ ನಿವಾಸಿಗಳು. ಇವರೆಲ್ಲರೂ ರೋಗಿ ಸಂಖ್ಯೆ 9573 ಹಾಗೂ 9574 ಹಾಗೂ 8311 ರ ಪ್ರಾಥಮಿಕ ಸಂಪರ್ಕಿತರು.
ಇವರಲ್ಲಿ 70 ವರ್ಷದ ಪುರುಷ, 30 ವರ್ಷದ ಯುವತಿ, 50 ವರ್ಷದ ಮಹಿಳೆ, 25 ವರ್ಷದ ಯುವತಿ, 30 ವರ್ಷದ ಯುವತಿ, 30 ವರ್ಷದ ಇಬ್ಬರು ಯುವಕರಿದ್ದಾರೆ. ಸೋಂಕಿತರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದುವರೆಗೆ ದಾಖಲಾಗಿರುವ ಸಕ್ರಿಯ ಸೋಂಕಿತರಲ್ಲಿ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ 45 ವರ್ಷದ ಮಹಿಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಗಾವಣೆಯಲ್ಲಿರುವ ಪ್ರಾಥಮಿಕ ಸಂಪರ್ಕಿತರ ಒಟ್ಟು ಸಂಖ್ಯೆ 130 ಆಗಿದ್ದು, ನಿಗಾವಣೆಯಲ್ಲಿರುವ ದ್ವಿತೀಯ ಸಂಪರ್ಕಿತರ ಸಂಖ್ಯೆ 172 ಆಗಿದೆ. ಒಟ್ಟಾರೆ 302 ಜನರು ನಿಗಾವಣೆಯಲ್ಲಿದ್ದಾರೆ.