ಇಂದು ವಿರಾಟ್ ಕೊಹ್ಲಿ ವಿಶ್ವದ ಅಗ್ರ ಶ್ರೇಣಿಯ ಆಟಗಾರ. ರನ್ ಮಶೀನ್. ಪ್ರತೀ ಪಂದ್ಯದಲ್ಲೂ ಹೊಸ ಹೊಸ ದಾಖಲೆ ಬರೆಯುತ್ತಿರುವ ಈ ಶತಕಗಳ ಸಾಮ್ರಾಟ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿರಿಸಿ ಹನ್ನೊಂದು ವರ್ಷ ಕಳೆಯಿತು. ಈ ಹನ್ನೊಂದು ವರ್ಷದ ʼವಿರಾಟ್ʼ ಕೆರಿಯರ್ ನ ಕ್ವಿಕ್ ಲುಕ್ ಇಲ್ಲಿದೆ.
2008ರಲ್ಲಿ ಮಲೇಶ್ಯಾದಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ಕೊಹ್ಲಿ ತಂಡದ ನಾಯಕರಾಗಿದ್ದರು. ಅದೇ ವರ್ಷ ಆಗಸ್ಟ್ ನಲ್ಲಿ ಲಂಕಾ ಪ್ರವಾಸ ಮಾಡಿದ್ದ ಭಾರತ ತಂಡದ ಆಟಗಾರರಾದ ವಿರೇಂದ್ರ ಸೆಹವಾಗ್ ಮತ್ತು ಸಚಿನ್ ತೆಂಡುಲ್ಕರ್ ಗಾಯಾಳಾದಾಗ ಕೊಹ್ಲಿಗೆ ಅನಿರೀಕ್ಷಿತ ಕರೆ ಬಂದಿತ್ತು. ಹೀಗೆ ಬದಲಿ ಆಟಗಾರನಾಗಿ ಲಂಕಾಗೆ ತೆರಳಿದ್ದ ಕೊಹ್ಲಿ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಡಂಬುಲಾ ಕ್ರೀಡಾಂಗಣದಲ್ಲಿ ಲಂಕಾ ವಿರುದ್ಧ ಕೊಹ್ಲಿ ಮೊದಲ ಪಂದ್ಯ. ಆದರೆ ಅಂದಿನ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 12 ರನ್.
ಈಗ ಶತಕಗಳ ಮೇಲೆ ಶತಕ ಬಾರಿಸುತ್ತಿರುವ ಕೊಹ್ಲಿ ಮೊದಲ ಶತಕ ಬಾರಿಸಿದ್ದು 2009ರಲ್ಲಿ. ಈಗ ಏಕದಿನ ಶತಕಗಳ ಪಟ್ಟಿಯಲ್ಲಿ ಸಚಿನ್ ನಂತರದ ಸ್ಥಾನದಲ್ಲಿರುವುದು ಕೊಹ್ಲಿಯೇ (43 ಶತಕ) 239 ಏಕದಿನ ಪಂದ್ಯದಲ್ಲಿ 11,520 ರನ್ ಗಳಿಸಿರುವ ಕೊಹ್ಲಿ, ಮುಂದೊಂದು ದಿನ ತೆಂಡುಲ್ಕರ್ ಮಾಡಿರುವ ಎಲ್ಲಾ ದಾಖಲೆಗಳನ್ನು ಮುರಿಯುವ ವಿಶ್ವಾಸ ಮೂಡಿಸಿದ್ದಾರೆ.
2010ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಕೊಹ್ಲಿ 77 ಟೆಸ್ಟ್ ಪಂದ್ಯದಲ್ಲಿ 6613 ರನ್ ಗಳಸಿದ್ದಾರೆ. 2012ರಲ್ಲಿ ಟೆಸ್ಟ್ ನಾಯಕತ್ವ ವಹಿಸಿದ ಕೊಹ್ಲಿ ಹಲವು ಐತಿಹಾಸಿಕ ಸರಣಿಯನ್ನು ಭಾರತಕ್ಕೆ ಗೆದ್ದು ಕೊಟ್ಟಿದ್ದಾರೆ.
ಲಂಕಾ ವಿರುದ್ಧದ ಹೋಬರ್ಟ್ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ 133 ರನ್ ಕೊಹ್ಲಿಯ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಗಳಲ್ಲಿ ಒಂದು. ಘಾತಕ ವೇಗಿ ಲಸಿತ್ ಮಾಲಿಂಗ ಎಸೆತಗಳನ್ನು ಮನಬಂದಂತೆ ದಂಡಿಸಿದ ಕೊಹ್ಲಿ ಯಾರೂ ಮರೆಯದ ಇನ್ನಿಂಗ್ಸ್ ಆಡಿದ್ದರು. ಪಾಕಿಸ್ಥಾನ ವಿರುದ್ಧದ 183 ರನ್ ಇನ್ನಿಂಗ್ಸ್, ಅಸೀಸ್ ವಿರುದ್ಧ ಅಡಿಲೇಡ್ ಟೆಸ್ಟ್ ಪಂದ್ಯದ 116 ರನ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕೊಹ್ಲಿಯ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.