ಆಂಧ್ರಪ್ರದೇಶ: ಭಾರೀ ಗಾತ್ರದ ಕ್ರೇನ್ ತುಂಡಾಗಿ ಬಿದ್ದ ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶ ವಿಶಾಖಪಟ್ಟಣಂನ ಹಿಂದೂಸ್ಥಾನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಶನಿವಾರ (ಆಗಸ್ಟ್ 01-2020) ನಡೆದಿರುವುದಾಗಿ ವರದಿ ತಿಳಿಸಿದೆ.
ಕ್ರೇನ್ ದುರಂತ ನಡೆದ ಬಗ್ಗೆ ಡಿಸಿಪಿ ಸುರೇಶ್ ಬಾಬು ಅವರು ಎಎನ್ ಐಗೆ ಖಚಿತಪಡಿಸಿದ್ದಾರೆ. ವಿಶಾಖಪಟ್ಟಣಂನ ಹಿಂದೂಸ್ಥಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ದಿಢೀರನೆ ತುಂಡಾಗಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ಮೂವರನ್ನು ಗುರುತಿಸಲಾಗಿದೆ. ಅಲ್ಲದೇ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕ್ರೇನ್ ದುರಂತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮಾಹಿತಿ ಪಡೆದುಕೊಂಡಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜನಸೇವಾದ ರಾಮಾಕೃಷ್ಣ ಎಎನ್ ಐಗೆ ತಿಳಿಸಿರುವಂತೆ, ಕ್ರೇನ್ ದುರಂತ ಶನಿವಾರ ಮಧ್ಯಾಹ್ನ ಸಂಭವಿಸಿತ್ತು. ಲೋಡ್ ಪರೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಈ ದುರಂತ ನಡೆದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಎಲ್ ಜಿ ಪಾಲಿಮರ್ ಗ್ಯಾಸ್ ಸೋರಿಕೆ ದುರಂತ ಕಂಡಿದ್ದು, ಇದೀಗ ಶಿಪ್ ಯಾರ್ಡ್ ನಲ್ಲಿ ಎರಡನೇ ಘಟನೆ ನಡೆದಿದೆ ಎಂದು ಹೇಳಿದರು.