Advertisement

ಮಹಿಳಾ ಆಯೋಗ ಅದಾಲತ್‌ : 54ರಲ್ಲಿ 11 ಪ್ರಕರಣಗಳಿಗೆ ತೀರ್ಪು

11:39 PM Sep 19, 2019 | Sriram |

ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯ ಮಹಿಳಾ ಆಯೋಗದ ಅದಾಲತ್‌ನಲ್ಲಿ ಒಟ್ಟು 54 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ 11 ಕೇಸುಗಳಿಗೆ ತೀರ್ಪು ನೀಡಲಾಗಿದೆ. 6 ಪ್ರಕರಣಗಳಲ್ಲಿ ಬೇರೆ ಬೇರೆ ಇಲಾಖೆಗಳು ವರದಿ ನೀಡುವಂತೆ ತಿಳಿಸಲಾಗಿದೆ. 37 ದೂರುಗಳನ್ನು ಮುಂದಿನ ಅದಾಲತ್‌ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ ಎಂದು ಆಯೋಗದ ಸದಸ್ಯೆ ಡಾ| ಷಾಹಿದಾ ಕಮಾಲ್‌ ತಿಳಿಸಿದರು.

Advertisement

ಈ ಪ್ರಕರಣಗಳಲ್ಲಿ ಕಳೆದ ಬಾರಿಯ ಅದಾಲತ್‌ನಲ್ಲಿ ಪರಿಶೀಲಿಸಲಾಗಿದ್ದ ನಡಕ್ಕಾವಿನ ಖಾಸಗಿ ಕಂಪೆನಿಯೊಂದರಲ್ಲಿ ಮಹಿಳಾ ನೌಕರರಿಗೆ ವೇತನ ಲಭಿಸದೇ ಇರುವ ಪ್ರಕರಣವೊಂದಕ್ಕೆ ಸುಖಾಂತ್ಯವಾಗಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ ಅವರ ಸಮಕ್ಷಮದಲ್ಲಿ ದೂರುದಾತರು ಮತ್ತು ಕಂಪೆ‌ನಿಯ ಪದಾಧಿಕಾರಿಗಳು ಸಂಧಾನಕ್ಕೆ ಒಪ್ಪಿದ್ದು, ವೇತನ ನೀಡಲಾಗಿದೆ ಎಂದು ವರದಿ ಸಲ್ಲಿಸಲಾಗಿದೆ ಎಂದರು.

ಇನ್ನೊಂದು ಪ್ರಕರಣದಲ್ಲಿ ಪತ್ನಿಯ ಹೆಸರಿನ ಜಾಗದಲ್ಲಿ ಮಕ್ಕಳೊಂದಿಗೆ ವಾಸವಾಗಿರುವ ಪತಿ, ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪರಿಣಾಮ ಅವರು ತಾತ್ಕಾಲಿಕ ಶೆಡ್ಡೊಂದರಲ್ಲಿ ಅನಾಥ ಸ್ಥಿತಿಯಲ್ಲಿ ಬದುಕಬೇಕಾಗಿ ಬಂದ ಪ್ರಕರಣ ಬಗೆಹರಿದಿದೆ. ಅದಾಲತ್‌ ನಡೆದ ವೇಳೆ ಆಯೋಗದ ಮಾತುಕತೆಗೆ ಬಗ್ಗದ ಪತಿ ಒತ್ತಾಯಿಸಿದರೆ ಆತ್ಮಹತ್ಯೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆಯೋಗದ ವಿನಂತಿಯಂತೆ ಪೊಲೀಸರು ಆಗಮಿಸಿದಾಗ ತನ್ನ ನಿಲುವನ್ನು ಬದಲಿಸಿದ ಆರೋಪಿ ಪತಿ ಪತ್ನಿಯನ್ನು ಮನೆಗೆ ಮರಳಿ ಕರೆತರಲು ಒಪ್ಪಿದ್ದರು. ಈ ಬಗ್ಗೆ ನಿಗಾ ಇರಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಷಾಹಿದಾ ಕಮಾಲ್‌ ತಿಳಿಸಿದರು.

ಚಿಕಿತ್ಸೆ ದೋಷ: ವಿವಿಧ ಪ್ರಕರಣಗಳಲ್ಲಿ
20 ಮಹಿಳೆಯರು ಸಾವು
ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯ ದೋಷದಿಂದ ಬೇರೆ ಬೇರೆ ಪ್ರಕರಣ ಗಳಲ್ಲಿ 20 ಮಹಿಳೆಯರು ಮೃತಪಟ್ಟಿರು ವುದಾಗಿ ದೂರು ಲಭಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಿರುವುದಾಗಿ ಷಾಹಿದಾ ತಿಳಿಸಿದರು. ಈ ವರದಿ ಲಭಿಸಿದ ಅನಂತರ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದರು. ಕೌಟುಂಬಿಕ ಸಮಸ್ಯೆಗಳು ಮತ್ತು ಆಸ್ತಿ ವಿವಾದಗಳು ಅಧಿಕವಾಗಿದ್ದುವು. ಆಯೋಗದ ವ್ಯಾಪ್ತಿಗೆ ಬರದೇ ಇರುವ ಪ್ರಕರಣಗಳನ್ನು ಆಯಾ ಇಲಾಖೆಗೆ ದೂರು ನೀಡುವಂತೆ ದೂರು ದಾತರಿಗೆ ತಿಳಿಸ ಲಾಗಿದೆ ಎಂದವರು ನುಡಿದರು.

ವಾರಂಟ್‌: ಪೊಲೀಸರ
ವಿರುದ್ಧವೇ ದೂರು
ವಾರಂಟ್‌ ಆರೋಪಿಯೋರ್ವ ನನ್ನು ಹುಡುಕಿ ಬಂದ ಪೊಲೀಸರ ಮೇಲೆಯೇ ಮಹಿಳೆಯೊಬ್ಬರು ಆರೋಪ ಹೊರಿಸಿದ ಪ್ರಕರಣವನ್ನು ಪರಿಶೀಲಿಸಿದ ಆಯೋಗ ಈ ಬಗ್ಗೆ ದೂರುದಾತರಿಗೆ ಮನವರಿಕೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಸಹಕರಿಸುವಂತೆ ಬುದ್ಧಿಮಾತು ಹೇಳಿ ಕಳುಹಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next