ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಎಂಟಿಸಿಗೆ ಕೋಟ್ಯಂತರ ರೂ. ವಂಚಿಸಿದ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಸ್ಥೆಯ ವಾಣಿಜ್ಯ ಶಾಖೆ ಮತ್ತು ಲೆಕ್ಕಪತ್ರ ಶಾಖೆಯ ಮುಖ್ಯಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಅಬ್ದುಲ್ ಖುದ್ದೂಸ್ ಎಂಬವರನ್ನು ವಿಲ್ಸನ್ ಗಾರ್ಡ್‌ನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಬ್ದುಲ್ ಖುದ್ದೂಸ್ ಬಿಎಂ ಟಿಸಿಗೆ 11.81 ಕೋಟಿ ರೂ. ವಂಚಿಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಸ್ಥೆಯ ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಸಿ.ಕೆ. ರಮ್ಯಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಂಚನೆ ಹೇಗೆ?: ಸಂಸ್ಥೆಯ ಅಧೀನದಲ್ಲಿರುವ ವಾಣಿಜ್ಯ ಮಳಿಗೆಗಳು/ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪರವಾನ ಗಿದಾರರಿಂದ ಕರಾರು ಒಪ್ಪಂದದ ಪ್ರಕಾರ ಪ್ರತಿ ತಿಂಗಳು ಸ್ವೀಕರಿಸಬೇಕಾದ ಲೈಸೆನ್ಸ್ ಫ್ರೀ, ಅದಕ್ಕೆ ಸಂಬಂಧಿಸಿದ ಜಿಎಸ್‌ಟಿ ಮೊತ್ತಕ್ಕೆ ವಾಣಿಜ್ಯ ಶಾಖೆಯಿಂದ ರಸೀದಿ ನೀಡಬೇಕಾಗಿದೆ. ಆದರೆ, ಸಂಸ್ಥೆಯಲ್ಲಿ 2021ರ ಮಾರ್ಚ್‌ನಿಂದ 2022ರ ಡಿಸೆಂಬರ್‌ವರೆಗೆ 20,24, 10,923 ರೂ. ಮೊತ್ತದ 456 ಕ್ರೆಡಿಟ್ ನೋಟ್‌ಗಳನ್ನು ಪರವಾನಗಿದಾರರಿಗೆ ವಿನಾಯಿತಿ ನೀಡಲಾಗಿದೆ.
ಅಲ್ಲದೆ, ಲೆಕ್ಕಪತ್ರ ಶಾಖೆ ಅಧಿಕಾರಿಯ ಆದೇಶವಿಲ್ಲದೆ 5.01ಕೋಟಿ ರೂ. ಮೊತ್ತದ 52 ಕ್ರೆಡಿಟ್ ನೋಟ್‌ಗಳನ್ನು ಅಕ್ರಮವಾಗಿ ತಯಾರಿಸಿ ಜಿಎಸ್‌ಟಿ ರಸೀದಿ ಜತೆ ಪಾವತಿಗಾಗಿ ಸಂಸ್ಥೆಯ ಲೆಕ್ಕಪತ್ರ ಇಲಾಖೆಗೆ ಕಳುಹಿಸಲಾಗಿತ್ತು. ವಾಣಿಜ್ಯ ಆದಾಯವನ್ನು ಕಡಿತಗೊಳಿಸಿ ಲೆಕ್ಕಪತ್ರ ಹೊಂದಾಣಿಕೆ ಮಾಡಿರುವುದೂ ಅಲ್ಲದೆ, ಜಿಎಸ್‌ಟಿ ಮೊತ್ತ ಪಾವತಿಸುವಾಗ ಸಂಸ್ಥೆಗೆ ಸಂದಾಯವಾಗಬೇಕಾಗಿದ್ದ ಪರವಾನಗಿ ಶುಲ್ಕದಲ್ಲಿಯೂ ಕಡಿತಗೊಳಿಸಲಾಗಿದೆ. ಅದರಿಂದ ಸಂಸ್ಥೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಅಬ್ದುಲ್ ಖುದ್ದೂಸ್ ಹಾಗೂ ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊ ಳ್ಳುವಂತೆ ರಮ್ಯಾ ದೂರಿನಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.