Advertisement

ಮೊಬೈಲ್‌ ಸಂಪರ್ಕಕ್ಕೆ 10 ಕಿ.ಮೀ. ಕ್ರಮಿಸಬೇಕು!

06:00 AM Aug 04, 2018 | Team Udayavani |

ಬೈಂದೂರು: ಡಿಜಿಟಲ್‌ ಇಂಡಿಯಾದ ಜಪ ನಡೆಯುತ್ತಿದ್ದರೂ, ಇನ್ನೂ ಬೈಂದೂರಿನ ಗ್ರಾಮೀಣ ಭಾಗಗಳಲ್ಲಿ ಮೊಬೈಲ್‌ ಸಂಪರ್ಕ ಮರೀಚಿಕೆಯಾಗಿದೆ. ಕಾರಣ ಇಲ್ಲಿ ಸೂಕ್ತ ಮೊಬೈಲ್‌ ಟವರ್‌ ಇಲ್ಲದ್ದರಿಂದ ನೆಟ್‌ವರ್ಕ್‌ ಇಲ್ಲ. ಬೈಂದೂರು ಸಮೀಪದ ತೂದಳ್ಳಿ, ಹೊಸೂರು, ಕೊಸಳ್ಳಿ  ಮುಂತಾದ ಊರುಗಳು ನೆಟ್‌ವರ್ಕ್‌ ಇಲ್ಲದೆ ಪರದಾಡುವಂತಾಗಿದೆ.

Advertisement

10 ಕಿ.ಮೀ. ಕ್ರಮಿಸಬೇಕು!
ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಗೋಳಿ ಬೇರು, ಅತ್ಯಾಡಿ,ಕೊಸಳ್ಳಿ,ಹೊಸೂರು, ತೂದಳ್ಳಿ ಮುಂತಾದ ಊರುಗಳು ಸಹ್ಯಾದ್ರಿ ತಪ್ಪಲಿನಲ್ಲಿವೆ. ಈ ಭಾಗದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿವೆ, 25,000ಕ್ಕೂ ಅಧಿಕ ಮೊಬೈಲ್‌ ಬಳಕೆದಾರರಿದ್ದಾರೆ. ಇವರು ಮೊಬೈಲ್‌ ನೆಟ್‌ವರ್ಕ್‌ ಪಡೆಯಬೇಕಾದರೆ ಕನಿಷ್ಠ  10 ಕಿ.ಮೀ ದೂರ ಕ್ರಮಿಸಬೇಕು. ಈ ಭಾಗದಲ್ಲೇ ಕೂಸಳ್ಳಿ ಜಲಪಾತವೂ ಇದೆ. ನೂರಾರು ಪ್ರವಾಸಿಗರೂ ಆಗಮಿಸುತ್ತಾರೆ. ಆಕಸ್ಮಿಕ ಘಟನೆಗಳೇನಾದರೂ ಈ ಭಾಗದಲ್ಲಿ ಸಂಭವಿಸಿದರೆ, ಮೊಬೈಲ್‌ ನೆಟ್‌ವರ್ಕ್‌ ಇಲ್ಲದ್ದರಿಂದ ತತ್‌ಕ್ಷಣ ಯಾರನ್ನೂ ಸಂಪರ್ಕಿಸಲೂ ಸಾಧ್ಯವಿಲ್ಲ.  

ವಿದ್ಯುತ್‌ ಇಲ್ಲ, ಸಂಪರ್ಕವೂ ಇಲ್ಲ
ಕೃಷಿಕರು ಅಧಿಕ ಸಂಖ್ಯೆಯಲ್ಲಿ ಇರುವ ಈ ಭಾಗದಲ್ಲಿ ಹೊರ ಪ್ರಪಂಚ ಸಂಪರ್ಕಕ್ಕೆ ಶಿರೂರು ಅಥವಾ ಬೈಂದೂರಿಗೆ ಬರಬೇಕು. ಇಲ್ಲಿಗೆ ಬಿಎಸ್‌ಎನ್‌ಎಲ್‌ ಕೂಡ ದೂರವಾಣಿ ಸಂಪರ್ಕ ನೀಡಿಲ್ಲ. ಆ್ಯಂಟೆನಾ ಮೂಲಕ ಕೆಲವು ಮನೆಗಳು ಸಂಪರ್ಕ ಪಡೆದಿದ್ದರೂ ಕರೆಂಟ್‌ ಇಲ್ಲದೇ ಇದು ಪ್ರಯೋಜನವಿಲ್ಲದಾಗಿದೆ.  ಅರಣ್ಯ ಪ್ರದೇಶವಾದ ಕಾರಣ ಮರಗಿಡದ ಕೊಂಬೆಗಳು ಬಿದ್ದು ವಾರಗಟ್ಟಲೆ ವಿದ್ಯುತ್‌ ಇರುವುದಿಲ್ಲ.  ಇಂತಹ ಸಂದರ್ಭದಲ್ಲಿ ಈ ಭಾಗದ ಜನರಿಗೆ ಯಾವುದೇ ಸಂಪರ್ಕ ಸಾಧನಗಳಿಲ್ಲ. ಅನೇಕ ಜನ ವಿದ್ಯಾವಂತ ಯುವಕರು ದುಡಿಮೆಗಾಗಿ ಬೆಂಗಳೂರು, ಮುಂಬೈ ಮುಂತಾದ ಕಡೆಗಳಲ್ಲಿದ್ದಾರೆ. ಮನೆ ಗಳಲ್ಲಿ ಹಿರಿಯರಿದ್ದು, ಅವರ ಯೋಗಕ್ಷೇಮ ವಿಚಾರಿಸಲೂ ಸಾಧ್ಯವಾಗುತ್ತಿಲ್ಲ.
 
ಪ್ರಧಾನಿಗೆ ಪತ್ರ
ದೂರವಾಣಿ, ಮೊಬೈಲ್‌ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಈ ಭಾಗಕ್ಕೆ  ದೂರವಾಣಿ ಇಲಾಖೆ ಒ.ಎಫ್‌.ಸಿ. ಕೇಬಲ್‌ ಅಳವಡಿಸಬೇಕು ಎಂದು ಸ್ಥಳೀಯರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸುವುದಾಗಿಯೂ ಉತ್ತರ ಬಂದಿತ್ತು. ಬಿಎಸ್‌ಎನ್‌ಎಲ್‌ ಅಧಿಕಾರಿಗಳೂ ಲಿಖೀತ ಉತ್ತರ ಕಳಿಸಿ, ಕಾಡಿನಿಂದಾವೃತ ಪ್ರದೇಶವಾದ ಕಾರಣ ಕೇಬಲ್‌ ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.  

ಟವರ್‌ ಸ್ಥಾಪಿಸಬೇಕು
ಆಧುನಿಕತೆ ಇಷ್ಟೆಲ್ಲಾ ಮುಂದುವರಿದಿದ್ದರೂ, ಗ್ರಾಮೀಣ ಭಾಗವಾದ ಅತ್ಯಾಡಿ, ಗೋಳಿಬೇರು ಮುಂತಾದೆಡೆ, ಮೊಬೈಲ್‌, ದೂರವಾಣಿ ಸಂಪರ್ಕ ಸರಿಯಾಗಿ ಇಲ್ಲದಿರುವುದು ಡಿಜಿಟಲ್‌ ಯುಗದ ಅಣಕವಾಗಿದೆ. ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುವಂತೆ ದೂರಸಂಪರ್ಕ ಇಲಾಖೆ ತೂದಳ್ಳಿಯಲ್ಲಿ ಮೊಬೈಲ್‌ ಟವರ್‌ ಸ್ಥಾಪಿಸಬೇಕು.  
– ಅಭಿಷೇಕ್‌, ಅತ್ಯಾಡಿ

– ಅರುಣ ಕುಮಾರ್‌ ಶಿರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next