ಕುಂದಾಪುರ: ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ನೆರವಾದ ನವೋದಯ ಗುಂಪುಗಳು ಪ್ರಸ್ತುತ ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿವೆ. ರಾಜ್ಯವ್ಯಾಪಿ ವಿಸ್ತರಣೆಗೆ ಬೇಡಿಕೆ ಬಂದಿದ್ದು, ಮಾರ್ಚ್ ಅನಂತರ ಹಾವೇರಿ, ಗದಗ, ದಾವಣಗೆರೆ ಹಾಗೂ ಧಾರವಾಡ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರಾಜ್ಯಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಸೋಮವಾರ ತಲ್ಲೂರಿನ ಶ್ರೀ ಜಲ ಅವೆನ್ಯೂ ಕಟ್ಟಡದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 108ನೇ ಶಾಖೆಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾ. 1ರಿಂದ ನವೋದಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 20 ಲಕ್ಷ ರೂ. ಸಾಲ ನೀಡುವ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಎಸ್‌ಡಿಸಿಸಿ ಬ್ಯಾಂಕಿನ 108ನೇ ವರ್ಷ ದಲ್ಲಿ ತಲ್ಲೂರಿನಲ್ಲಿ 108ನೇ ಶಾಖೆ ಉದ್ಘಾಟನೆ ಯಾಗಿದ್ದು, ಆರಂಭದಲ್ಲೇ 4 ಕೋ.ರೂ.ಗೂ ಮಿಕ್ಕಿ ವೈಯಕ್ತಿಕ ಠೇವಣಿ ಸಂಗ್ರಹವಾಗಿದೆ ಎಂದರು.
ಶಾಖೆಯನ್ನು ಉದ್ಘಾಟಿಸಿ, ಠೇವಣಿ ಪತ್ರ ವಿತರಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯ ಸರ್ವ ತೋಮುಖ ಅಭಿವೃದ್ಧಿಗೆ ಕಾರಣ ರಾಗಿದ್ದ ಶ್ರೀನಿವಾಸ ಮಲ್ಯ, ಜಾರ್ಜ್ ಫೆರ್ನಾಂಡಿಸ್, ಡಾ| ವಿ.ಎಸ್. ಆಚಾರ್ಯ, ಮೊಳಹಳ್ಳಿ ಶಿವ ರಾಯರಂತೆ ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಡಾ| ರಾಜೇಂದ್ರ ಕುಮಾರ್ ಅವರ ದಕ್ಷ ಆಡಳಿತ ದಿಂದ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿ ಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹಾಗೂ ಗಣಕೀಕರಣ ಉದ್ಘಾಟಿಸಿದ ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿದರು.
ಭದ್ರತಾ ಕೋಶವನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಉದ್ಘಾಟಿಸಿದರು.
ಸಮ್ಮಾನ
ಯೋಗಪಟು ಧನ್ವಿ ಪೂಜಾರಿ ಮರವಂತೆ, ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಕಟ್ಟಡದ ಮಾಲಕ ಜಯಸೂರ್ಯ ಪೂಜಾರಿ ಹಾಗೂ ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
30 ಸ್ವಸಹಾಯ ಗುಂಪು
ನೂತನ ಶಾಖೆಯಲ್ಲಿ 30 ಸ್ವಸಹಾಯ ಗುಂಪುಗಳು ಹೆಸರನ್ನು ನೋಂದಾಯಿಸಿದ್ದು, ಮೊದಲ ದಿನವೇ 2.25 ಕೋ.ರೂ. ಸಾಲ ನೀಡ ಲಾಗಿದೆ. 4 ಕೋ.ರೂ. ವೈಯಕ್ತಿಕ ಠೇವಣಿ ಸಹಿತ ಒಟ್ಟು 12 ಕೋ.ರೂ. ಠೇವಣಿ ಸಂಗ್ರಹವಾಗಿದೆ.
ವಿವಿಧ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಯು. ಕೃಷ್ಣಮೂರ್ತಿ, ಗೋಪಾಲ ಪೂಜಾರಿ , ತಿಮ್ಮ ಪೂಜಾರಿ ಕೋಟ, ಸದಾನಂದ ಬಳ್ಕೂರು, ಶರತ್ ಕುಮಾರ ಶೆಟ್ಟಿ, ಸುಧಾಕರ ಶೆಟ್ಟಿ ಬಾಂಡ್ಯ, ಎಸ್‌ಸಿಡಿಸಿಸಿ ಬ್ಯಾಂಕಿನ ಮುಖ್ಯ ಪ್ರಬಂಧಕ ಗೋಪಿಕೃಷ್ಣ ಭಟ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಎಸ್. ರಾಜು ಪೂಜಾರಿ ಸ್ವಾಗತಿಸಿ, ಮಹೇಶ್ ಹೆಗ್ಡೆ ಮೊಳಹಳ್ಳಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಅವರು ಕಾರ್ಯಕ್ರಮ ನಿರೂಪಿಸಿದರು.