Advertisement

108ರ ಹಿರಿಯಜ್ಜನಿಗೆ ಡಿಎಲ್‌ ಭೂಷಣ

02:29 AM Feb 23, 2022 | Team Udayavani |

ಉಡುಪಿ: ಶತಾಯುಷಿ, ನಿವೃತ್ತ ಸೈನಿಕ, 108 ವರ್ಷ ವಯಸ್ಸಿನ ಚಾರ್ಲ್ಸ್‌ ಮೈಕಲ್‌ ಡಿ’ಸೋಜಾ ಕರಾವಳಿಯಲ್ಲಿ ವಾಹನ ಚಾಲನೆ ಪರವಾನಿಗೆ ಹೊಂದಿರುವ ಹಿರಿಯಜ್ಜ. ರಾಜ್ಯದ ಬೇರೆಡೆ ಇರುವುದೂ ದುರ್ಲಭ.

Advertisement

ಮಂಗಳೂರು ಲೇಡಿಹಿಲ್‌ ಮತ್ತು ಉಡುಪಿ ಪರ್ಕಳದ ನಿವಾಸಿಯಾಗಿರುವ ಚಾರ್ಲ್ಸ್‌ ಅವರಿಗೆ 108 ವರ್ಷ ಪ್ರಾಯ. ಕಾರು ಕೊಟ್ಟರೆ ಈಗಲೂ ಸಲೀಸಾಗಿ ಚಾಲನೆ ಮಾಡಿ ನಿಬ್ಬೆರಗುಗೊಳಿಸುತ್ತಾರೆ. ಇವರ ಲವಲವಿಕೆ, ಉತ್ಸಾಹ ಕಂಡು ಪ್ರಾದೇಶಿಕ ಸಾರಿಗೆ ಇಲಾಖೆ 2022ರ ವರೆಗೆ ಡಿಎಲ್‌ ಪರವಾನಿಗೆ ನವೀಕರಿಸಿದೆ. ಆದರೆ ಚಾರ್ಲ್ಸ್‌ ಅವರ ಆರೋಗ್ಯ ಕಾಳಜಿ ಗಾಗಿ ಮನೆ ಯವರೇ ಕಾರು ಚಾಲನೆಗೆ ಅವಕಾಶ ಕೊಡುತ್ತಿಲ್ಲ.

ಯುವಕರು ನಾಚುವಂತೆ, ಸಲೀಸಾಗಿ ಕಾರು ಚಲಾಯಿಸುವ ಇವರು ಶಿಸ್ತಿನ ಜೀವನದ ಸಿಪಾಯಿ. ಸರಕಾರದಿಂದ ಬರುವ ಪಿಂಚಣಿ ಮೊತ್ತದಲ್ಲಿ ಜೀವನ ನಿರ್ವಹಿಸುತ್ತಾರೆ. ಪತ್ನಿ ಎಲಿಸಾ ಡಿ’ಸೋಜಾ 9 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಂಗಳೂರಿನ ನಿವಾಸದಲ್ಲಿ ಒಬ್ಬರೇ ಇರುವ ಅವರು ಬಟ್ಟೆ ಒಗೆಯುವುದು, ಅಡುಗೆ, ಮನೆ ಕೆಲಸದ ಜತೆಗೆ ತೋಟದ ಕೆಲಸವನ್ನು ನಿರ್ವಹಿಸುತ್ತಾರೆ.

ಬ್ರಿಟಿಷ್‌ ಸೇನೆಯಲ್ಲಿ 10 ವರ್ಷ ಸೇವೆ
1914ರಲ್ಲಿ ಊಟಿಯಲ್ಲಿ ಜನಿಸಿದ ಚಾರ್ಲ್ಸ್‌ ಆಗಿನ ಕಡ್ಡಾಯ ನಿಯಮದಂತೆ 18ನೇ ವಯಸ್ಸಿಗೆ ಬ್ರಿಟಿಷ್‌ ಸೇನೆ ಸೇರಿದ್ದರು. 10 ವರ್ಷ ಸೇವೆ ಸಲ್ಲಿಸಿ ಸೇನೆಯಿಂದ ನಿರ್ಗಮಿಸಿದರು. ಅನಂತರ ಮದ್ರಾಸ್‌ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಕಾಂಕ್ರೀಟ್‌ ಯಂತ್ರ ಚಲಾಯಿಸುವ ವಾಹನದ ಚಾಲಕರಾಗಿ ಮಂಗಳೂರಿಗೆ ಬಂದು ನೆಲೆಸಿದರು. ಈ ಅವಧಿಯಲ್ಲಿ ಸೀತಾನದಿ, ಕಲ್ಮಾಡಿ, ಕೂಳೂರು, ಗಾಳಿತಟ್ಟು, ಉದ್ಯಾವರ, ಗಂಗೊಳ್ಳಿ ಭಾಗದಲ್ಲಿ ನಿರ್ಮಿಸಿದ ಸೇತುವೆಗಳ ಯಶೋಗಾಥೆ ಹೇಳುತ್ತಾರೆ ಚಾರ್ಲ್ಸ್‌.

ಸಂಸ್ಕೃತ ವಿದ್ಯಾರ್ಥಿಗಳ ಶ್ರಮದಾನ
ಕಲ್ಮಾಡಿ ಹೊಳೆಗೆ ಸೇತುವೆ ನಿರ್ಮಿಸುವಾಗ ರಾತ್ರಿ, ಹಗಲು ಕೆಲಸ ನಡೆಯುತ್ತಿತ್ತು. ಹಗಲು ಕಾರ್ಮಿಕರು ಕೆಲಸ ಮಾಡಿದರೆ, ರಾತ್ರಿ ಉಡುಪಿಯ ಸಂಸ್ಕೃತ ಕಾಲೇಜು ವಿದ್ಯಾರ್ಥಿಗಳು ಸೇವಾ ರೂಪದಲ್ಲಿ ಕೆಲಸ ನಿರ್ವ ಹಿಸು ತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಚಾರ್ಲ್ಸ್‌.

Advertisement

ತಾಯಿಯ ಪರಂಪರೆ,
ಮರಿಮೊಮ್ಮಗಳಿಗೆ ನೆರವು
ಚಾರ್ಲ್ಸ್‌ ಅವರು ಶಿಸ್ತು ಮತ್ತು ಬದ್ಧತೆಯ ಜೀವನ ಶೈಲಿಯಿಂದ 108 ವರ್ಷ ವಾದರೂ ಆರೋಗ್ಯದಿಂದ ಇದ್ದಾರೆ.
ಅವರ ತಾಯಿ ಮೇರಿ ಕೂಡ 108 ವರ್ಷ ಆರೋಗ್ಯದಿಂದ ಬದುಕಿದ್ದರು. ಚಾರ್ಲ್ಸ್‌ ಅವರು ಉಡುಪಿಯ ಪರ್ಕಳಕ್ಕೆ ಬಂದಾಗಲೂ ತನ್ನ ಬಟ್ಟೆಗಳನ್ನು ಸ್ವತಃ ತೊಳೆದು ಕೊಳ್ಳುತ್ತಾರೆ. ಮರಿ ಮೊಮ್ಮಗಳ ಶಾಲಾ ಸಮವಸ್ತ್ರವನ್ನೂ ಅಕ್ಕರೆಯಿಂದ ಒಗೆದು ಕೊಡುತ್ತಾರೆ ಎಂದು ಪರ್ಕಳದ ಗ್ಯಾಟ್ಸನ್‌ ಕಾಲನಿಯಲ್ಲಿ ನೆಲೆಸಿರುವ ಚಾರ್ಲ್ಸ್‌
ಅವರ ಅಣ್ಣನ ಪುತ್ರಿ ರಜಿನಾ ಅವರು ಹೇಳುತ್ತಾರೆ.

ಈ ಹಿಂದೆ ನಾನು ಮಂಗಳೂರು ಆರ್‌ಟಿಒ ಅಧಿಕಾರಿಯಾಗಿದ್ದಾಗ ಚಾರ್ಲ್ಸ್‌ ಅವರಿಗೆ 103 ವರ್ಷವಾಗಿತ್ತು. ಆ ಸಂದರ್ಭದಲ್ಲಿ ವಾಹನ ಚಾಲನೆಯಲ್ಲಿ ಸದೃಢರಾಗಿದ್ದರಿಂದ ಪರವಾನಿಗೆ ನವೀಕರಣ ಮಾಡಿದ್ದೆವು. ಆಗಲೇ ಅವರು 50-60 ವರ್ಷದವರಂತೆ ಉಲ್ಲಾಸಭರಿತ ರಾಗಿದ್ದರು. ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ.
– ಗಂಗಾಧರ್‌ ಜೆ.ಪಿ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next