Advertisement

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

12:55 AM Mar 22, 2024 | Team Udayavani |

ರಾಜ್ಯದಲ್ಲಿ ಜಾರಿಯಲ್ಲಿರುವ ಉಚಿತ ಆ್ಯಂಬುಲೆನ್ಸ್‌ ಸೇವಾ ಯೋಜನೆಯಾದ 108 ಆರೋಗ್ಯ ಕವಚ ಯೋಜನೆಯ ಸಿಬಂದಿಗೆ ಕಳೆದ ಮೂರು ತಿಂಗಳುಗಳಿಂದ ಸಂಬಂಧಿತ ಗುತ್ತಿಗೆದಾರ ಸಂಸ್ಥೆ ವೇತನ ನೀಡದೆ ಸತಾಯಿಸುತ್ತಿರುವುದು ತೀರಾ ಖಂಡನೀಯ. ವೇತನ ಪಾವತಿ, ವಾರ್ಷಿಕ ವೇತನ ಪರಿಷ್ಕರಣೆ ಮತ್ತಿತರ ತಮ್ಮ ಬೇಡಿಕೆಗಳಿಗೆ ಮುಂದಿನ 10 ದಿನಗಳ ಒಳಗಾಗಿ ಸಂಸ್ಥೆ ಮತ್ತು ಸರಕಾರ ಸ್ಪಂದಿಸದೇ ಹೋದಲ್ಲಿ ಮುಷ್ಕರ ಕೈಗೊಳ್ಳುವುದಾಗಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆ ಬಡಜನರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಬಡವರ ಪಾಲಿಗೆ ಸಂಜೀವಿನಿಯಂತಿರುವ ಈ 108 ಆ್ಯಂಬುಲೆನ್ಸ್‌ಗಳ ಸಿಬಂದಿಗೆ ಗುತ್ತಿಗೆದಾರ ಸಂಸ್ಥೆ ಸೂಕ್ತ ಮತ್ತು ನ್ಯಾಯೋಚಿತ ವೇತನ, ಭತ್ತೆ ಇನ್ನಿತರ ಅಗತ್ಯ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುತ್ತಿಲ್ಲ ಎಂಬ ದೂರು ಇಂದು-ನಿನ್ನೆಯದೇನಲ್ಲ. ಜನರಿಗೆ ಅದರಲ್ಲೂ ಮುಖ್ಯವಾಗಿ ಬಡವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗುವಂತೆ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ ಈ ಆ್ಯಂಬುಲೆನ್ಸ್‌ ಸೇವೆಯ ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿದೆ.

ಆದರೆ ಆ್ಯಂಬುಲೆನ್ಸ್‌ ನೌಕರರು ಮತ್ತು ಸಂಸ್ಥೆ ನಡುವೆ ಪದೇಪದೆ ಇಂತಹ ಸಮಸ್ಯೆಗಳು ತಲೆದೋರುತ್ತಲೇ ಇವೆ. ಆ್ಯಂಬುಲೆನ್ಸ್‌ ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಮುಷ್ಕರವನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಕೆಲವು ದಿನಗಳ ಕಾಲ ಮುಷ್ಕರ ನಡೆಸಿ ಜನರ ಸಂಕಷ್ಟ ಮಿತಿಮೀರಿದ ಬಳಿಕ ಸರಕಾರ ಮಧ್ಯಪ್ರವೇಶಿಸಿ ಗುತ್ತಿಗೆದಾರ ಸಂಸ್ಥೆಯ ಮನವೊಲಿಸಿ, ನೌಕರರ ಬೇಡಿಕೆಗಳನ್ನು ಭಾಗಶಃ ಈಡೇರಿಸಿ, ಮತ್ತೂಂದಿಷ್ಟು ಭರವಸೆಗಳನ್ನು ನೀಡುವುದರೊಂದಿಗೆ ಮುಷ್ಕರ ಕೊನೆಗೊಳ್ಳುತ್ತದೆ. ಈಗ ಮತ್ತದೇ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾದಂತೆ ತೋರುತ್ತಿದೆ.

ರಾಜ್ಯ ಸರಕಾರವೇನೋ ಆರೋಗ್ಯ ಕವಚ ಯೋಜನೆಯ 108 ಆ್ಯಂಬುಲೆನ್ಸ್‌ ಸೇವೆಯ ನಿರ್ವಹಣೆಯ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿ ಕೈತೊಳೆದುಕೊಂಡು ಬಿಟ್ಟಿದೆ. ಯೋಜನೆಯ ನಿರೀಕ್ಷಿತ ಉದ್ದೇಶ ಈಡೇರುತ್ತಿದೆಯೇ, ಆ್ಯಂಬುಲೆನ್ಸ್‌ಗಳ ನಿರ್ವಹಣೆ ಸಮರ್ಪಕವಾಗಿದೆಯೇ, ಅದರ ಸಿಬಂದಿಗೆ ಸೂಕ್ತ ವೇತನ, ಸೇವಾಸೌಲಭ್ಯಗಳು ಲಭಿಸುತ್ತಿವೆಯೇ ಇವ್ಯಾವ ವಿಷಯಗಳ ಬಗೆಗೂ ತಲೆಕೆಡಿಸಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ. ಆ್ಯಂಬುಲೆನ್ಸ್‌ ನೌಕರರು ಮುಷ್ಕರ, ಪ್ರತಿಭಟನೆಯ ಹಾದಿ ಹಿಡಿದು ಸಮಸ್ಯೆ ಉಲ್ಬಣಿಸಿದ ಬಳಿಕ ಮಧ್ಯಪ್ರವೇಶಿಸುವುದಷ್ಟೆ ತನ್ನ ಹೊಣೆಗಾರಿಕೆ ಎಂದು ಭಾವಿಸಿದೆ. ಇನ್ನು ಗುತ್ತಿಗೆದಾರ ಸಂಸ್ಥೆಯಂತೂ ಸಿಬಂದಿಯ ಯಾವೊಂದೂ ಬೇಡಿಕೆ, ಕೂಗಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಅಗತ್ಯ ಸಂಖ್ಯೆಯಲ್ಲಿ ಸಿಬಂದಿಯನ್ನೂ ನೇಮಿಸಿಕೊಳ್ಳದೆ ಲಭ್ಯವಿರುವ ಸಿಬಂದಿಯನ್ನು ಮನಸೋ ಇಚ್ಛೆ ದುಡಿಸಿಕೊಳ್ಳುತ್ತಿದೆ.

108 ಆ್ಯಂಬುಲೆನ್ಸ್‌ ಸಿಬಂದಿ ಮತ್ತು ಗುತ್ತಿಗೆದಾರ ಸಂಸ್ಥೆ ನಡುವಣ ಬಿಕ್ಕಟ್ಟನ್ನು ಶಾಶ್ವತವಾಗಿ ಬಗೆಹರಿಸಲು ಸರಕಾರ ಇನ್ನಾದರೂ ಮುಂದಾಗಬೇಕು. ಗುತ್ತಿಗೆದಾರ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡಿ ಅದನ್ನು ಪಾಲಿಸಲು ನಿರ್ದಿಷ್ಟ ಕಾಲಾವಕಾಶವನ್ನು ನೀಡಬೇಕು. ಇದೇ ವೇಳೆ 108 ಆ್ಯಂಬುಲೆನ್ಸ್‌ ಸಿಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪದೇಪದೆ ಮುಷ್ಕರದ ಹಾದಿ ತುಳಿಯುವುದನ್ನು ಬಿಟ್ಟು, ಗುತ್ತಿಗೆದಾರ ಸಂಸ್ಥೆ ಮತ್ತು ಸರಕಾರದ ಮಟ್ಟದಲ್ಲಿ ಸಮಾಲೋಚನೆಗಳನ್ನು ನಡೆಸಿ, ಒತ್ತಡವನ್ನು ಹೇರಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಖಾತರಿಪಡಿಸುವ ಹೊಣೆಗಾರಿಕೆ ಈ ಮೂವರ ಮೇಲಿದೆ ಎಂಬುದನ್ನು ಮಾತ್ರ ಮರೆಯಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next