Advertisement

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

12:04 AM May 07, 2024 | Team Udayavani |

ಬೆಂಗಳೂರು: ಬಾಕಿ ವೇತನ ಪಾವತಿಗೆ ಆಗ್ರಹಿಸಿ “108-ಆರೋಗ್ಯ ಕವಚ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬಂದಿಯ ಮುಷ್ಕರದ ಬಗ್ಗೆ ಮಂಗಳವಾರ ನಿರ್ಧಾರವಾಗಲಿದೆ.

Advertisement

ಈ ಸಂಬಂಧ ಇಂದು ಮಧ್ಯಾಹ್ನ 1 ಗಂಟೆಗೆ ಆರೋಗ್ಯ ಇಲಾಖೆಯ ಆಯುಕ್ತರು ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆದಿದ್ದು, ಅಲ್ಲಿ ಸಮಸ್ಯೆಗಳು ಇತ್ಯರ್ಥವಾಗದಿದ್ದಲ್ಲಿ ಮುಷ್ಕರದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು 108 ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್‌.ಎಚ್‌.ಪರಮಶಿವ ತಿಳಿಸಿದ್ದಾರೆ.

ಈಗಾಗಲೇ ಸರಕಾರದ ಹಿರಿಯ ಅಧಿಕಾರಿಗಳು ಸಭೆಗೆ ಆಹ್ವಾನ ನೀಡಿದ್ದಾರೆ. ಆ ಸಭೆಯಲ್ಲಿ ಸಿಬಂದಿಯ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಅನಂತರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದ್ದಾರೆ.

ಸರಕಾರ‌ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್‌
ಏತನ್ಮಧ್ಯೆ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸರಕಾರ ಆರೋಗ್ಯ ಕವಚ ಸಿಬಂದಿಯ ವೇತನವನ್ನು ಬಾಕಿ ಉಳಿಸಿಕೊಂಡಿಲ್ಲ. ಆ್ಯಂಬುಲೆನ್ಸ್‌ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಸರಕಾರ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

108 ಆ್ಯಂಬುಲೆನ್ಸ್‌ ಯೋಜನೆ ಸುಗಮವಾಗಿ ನಡೆಸಲು 2023-24ನೇ ಸಾಲಿನಲ್ಲಿ ಆರ್ಥಿಕ ಇಲಾಖೆ ಯಿಂದ ಆರೋಗ್ಯ ಇಲಾಖೆಗೆ ರೂ. 210.33 ಕೋ. ರೂ.ಗಳ ಅನುಮೋದನೆಯಾಗಿದೆ. ಈ ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ನಿಗದಿಯಾದ 162.40 ಕೋ. ರೂ. ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

Advertisement

2024-25ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 260.33 ಕೋ. ರೂ.ಗಳ ಅನುದಾನ ಆಯವ್ಯಯದಲ್ಲಿ ಅನುಮೋದನೆಯಾಗಿದೆ. ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ವಾರ್ಷಿಕ 162.40 ಕೋ. ರೂ.ಗಳ ಅನುದಾನ ಬಿಡುಗಡೆಗೊಳಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್‌.ಐ. ಗ್ರೀನ್‌ ಹೆಲ್ತ್‌ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ 711 ಆ್ಯಂಬುಲೆನ್ಸ್‌ ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸೇವೆ ಒದಗಿಸಿದ್ದಲ್ಲಿ ಪ್ರತಿ ತ್ರೈಮಾಸಿಕಕ್ಕೆ 40.60 ಕೋ. ರೂ. ಗಳಂತೆ ವಾರ್ಷಿಕ 162.40 ಕೋ. ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಲೋಪದೋಷ
ವಿಪಕ್ಷಗಳ ನಾಯಕರು ಅನಗತ್ಯವಾಗಿ ಗ್ಯಾರಂಟಿ ಯೋಜನೆಯಿಂದ ಹಣಕಾಸಿನ ತೊಂದರೆಯಾಗಿದೆ ಎಂದು 108 ಆರೋಗ್ಯ ಕವಚ ಯೋಜನೆಗೆ ತಳುಕು ಹಾಕುವುದರಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೆ, ಸರಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ. 45 ವೇತನ ಹೆಚ್ಚಳ ಮಾಡಲಾಗಿತ್ತು. ಈಗ 108 ಸಿಬಂದಿ ಶೇ.45 ವೇತನ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿಸಿದರು.

ಆ್ಯಂಬುಲೆನ್ಸ್‌ ಚಾಲಕರಿಗೆ 35 ಸಾ.ರೂ.ಗೂ ಹೆಚ್ಚು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ.45 ಹೆಚ್ಚಳ ಮಾಡುವ ಬಗ್ಗೆ ಸಿಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ಬಗ್ಗೆ 108 ಸಿಬಂದಿಯನ್ನು ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next