ಹೊಸದಿಲ್ಲಿ: ದೇಶದಲ್ಲಿ 10.52 ಲಕ್ಷದಷ್ಟಿರುವ ನಕಲಿ ಪ್ಯಾನ್ ಕಾರ್ಡ್‌ಗಳಿಂದ ಅಂದರೆ ಒಟ್ಟು ಪ್ಯಾನ್ ಕಾರ್ಡ್‌ಗಳ ಶೇ.0.4ರಷ್ಟರಿಂದ ದೇಶದ ಆರ್ಥಿಕತೆ ಮೇಲೆ ಹಾನಿಯೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸುವ ಆದಾಯ ತೆರಿಗೆ 139 ಎಎ ಕಾಯ್ದೆಯನ್ನು ಎತ್ತಿಹಿಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೀಗೆ ಹೇಳಿದೆ. ದೇಶದಲ್ಲಿ 11.35 ಲಕ್ಷ ನಕಲಿ ಪ್ಯಾನ್ ಕಾರ್ಡ್‌ಗಳಿವೆ ಎಂದು ಹೇಳಲಾಗಿದ್ದು, ಅದರಲ್ಲಿ 10.52 ಲಕ್ಷ ವೈಯಕ್ತಿಕ ಪ್ಯಾನ್ ಕಾರ್ಡ್‌ಗಳಾಗಿವೆ. ಆದರೆ ಒಟ್ಟು ಪ್ಯಾನ್ ಕಾರ್ಡ್‌ಗಳಿಗೆ ಹೋಲಿಸಿದರೆ, ಇದು ಅತಿ ಕಡಿಮೆ ಪ್ರಮಾಣ. ಆದರೆ, ಇದರಿಂದ ಆರ್ಥಿಕತೆಗೆ ಧಕ್ಕೆಯೇ ಇಲ್ಲ ಎಂದು ತಳ್ಳಿಹಾಕಲಾಗದು ಎಂದಿದೆ.
ನಕಲಿ ಪ್ಯಾನ್‌ಗಳ ಸಂಖ್ಯೆ ಅತಿ ಕಡಿಮೆ ಇದ್ದು, ಅದರಿಂದ ಪ್ಯಾನ್ – ಆಧಾರ್ ಕಡ್ಡಾಯ ಮಾಡ ಬೇಕಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಉತ್ತರವಾಗಿ ಸುಪ್ರೀಂ ಕೋರ್ಟ್ ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ಹೀಗೆ ಹೇಳಿದೆ. ಕೇವಲ ಶೇ 0.4ರಷ್ಟು ಮಾತ್ರ.. ಎಂದೆಲ್ಲ ನಾವು ಅಂಕಿ ಅಂಶಗಳನ್ನು ಮಾತ್ರ ಪರಿಗಣಿಸಲು ಸಾಧ್ಯವಿಲ್ಲ. ನಕಲಿ ಎಂದರೆ ಅದು ದೇಶದ ಆರ್ಥಿಕತೆಗೆ ಮಾರಕ. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೇ ಕಪ್ಪುಹಣವನ್ನು ಆಧಾರ್ ಕಡ್ಡಾಯದಂತಹ ಒಂದೊಂದು ಕಾರ್ಯಗಳಿಂದ ತಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಏಕಕಾಲಕ್ಕೆ ಹಲವು ಸಂಯೋಜಿತ ಕಾರ್ಯಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದಿದೆ.
ರಾಜೀವ್ ಹೇಳಿಕೆ ಉಲ್ಲೇಖೀಸಿದ ಸುಪ್ರೀಂ: ತೀರ್ಪಿನಲ್ಲಿ ಸುಪ್ರೀಂ ನ್ಯಾಯಪೀಠವು, ‘ಸರಕಾರ ಖರ್ಚು ಮಾಡುವ ಪ್ರತಿ 1 ರೂ.ನಲ್ಲಿ ಫಲಾನುಭವಿಗಳಿಗೆ ದಕ್ಕುವುದು ಕೇವಲ 15 ಪೈಸೆ ಮಾತ್ರ’ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖೀಸಿದೆ. ಆದ್ದರಿಂದ ಸರಕಾರಿ ಯೋಜನೆಗಳಲ್ಲಿ ಆಧಾರ್ ತರುವುದು ಪ್ರಯೋಜನಕಾರಿಯಾಗಿದ್ದು, ಫಲಾನುಭವಿಗಳಿಗೇ ನೇರ ನೆರವು ನೀಡುವಲ್ಲಿ ಸಹಾಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದೆ. 1985ರಲ್ಲಿ ಒಡಿಶಾದ ಬರಪೀಡಿತ ಕಾಲಹಂಡಿ ಜಿಲ್ಲೆಯಲ್ಲಿ ರಾಜೀವ್ 15 ಪೈಸೆ ಮಾತ್ರ ಫಲಾನುಭವಿಗಳನ್ನು ಸೇರುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ನಕಲಿ ಆಧಾರ್ ಕಾರ್ಡ್ ಉತ್ತರಕ್ಕೆ ನಕಾರ: ದೇಶದಲ್ಲಿ ನಕಲಿ ಆಧಾರ್ ಕಾರ್ಡ್‌ಗಳು ಎಷ್ಟಿವೆ ಎಂಬುದರ ಬಗ್ಗೆ ಮಾಹಿತಿ ನೀಡಲು ಆಧಾರ್ ಪ್ರಾಧಿಕಾರ ನಿರಾಕರಿಸಿದೆ. ಮಾಹಿತಿ ಹಕ್ಕು ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಯುಐಎಡಿಐ, ಇದನ್ನು ಬಯಲುಗೊಳಿಸಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯವಾಗುವ ಸಾಧ್ಯತೆ ಇದೆ ಎಂದಿದೆ.