ನವದೆಹಲಿ/ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕ ಎದುರಿಸಿದ ಬರ ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರ, 1,029.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹಾಲಿ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರ ಸಮಿತಿ ಕಳುಹಿಸಲೂ ನಿರ್ಧರಿಸಲಾಗಿದೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ, ಒಡಿಶಾ, ಹಿಮಾಚಲ ಪ್ರದೇಶ ರಾಜ್ಯಗಳು ಕಳೆದ ವರ್ಷ ಎದುರಿಸಿದ ನೈಸರ್ಗಿಕ ವಿಕೋಪಗಳಿಗೆ ಅನುಗುಣವಾಗಿ ಒಟ್ಟು 4,432 ಕೋಟಿ ರೂ. ಬಿಡುಗಡೆ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು. ಫೋನಿ ಚಂಡ ಮಾರುತದಿಂದ ಪೆಟ್ಟು ತಿಂದ ಒಡಿಶಾಗೆ 3338.22 ಕೋಟಿ, ಬರ ಪರಿಸ್ಥಿತಿ ಎದುರಿಸಿದ ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ. ನೀಡಲಾಗಿದೆ.
ಕೇಂದ್ರ ಸಮಿತಿಯಿಂದ ಅಧ್ಯಯನ: ಪ್ರಸಕ್ತ ವರ್ಷದ ಪ್ರವಾಹದಿಂದ ಕರ್ನಾಟಕದಲ್ಲಿ ಆಗಿರುವ ನಷ್ಟದ ಅಧ್ಯಯನಕ್ಕಾಗಿ ಅಂತರ ಸಚಿವಾಲಯದ ಅಧಿಕಾರಿಗಳುಳ್ಳ ಕೇಂದ್ರೀಯ ಸಮಿತಿಯೊಂದನ್ನು (ಐಎಂಸಿಟಿ) ಕಳುಹಿಸಲೂ ಇದೇ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮಿತಿಯು ಸಲ್ಲಿಸುವ ವರದಿ ಆಧರಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಲಿದೆ.
ಸಮಿತಿ ರಚನೆ ವಿಧಾನದಲ್ಲೂ ಬದಲು: ಪ್ರವಾಹ, ಬರ ಸೇರಿದಂತೆ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ರಾಜ್ಯಗಳ ವಿಜ್ಞಾಪನೆಯಂತೆ ಕೇಂದ್ರ ತಂಡ ಕಳುಹಿಸಲಾಗುತ್ತಿತ್ತು. ಇನ್ನು ಮುಂದೆ ಇಂಥ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತಕ್ಷಣವೇ ಕೇಂದ್ರದ ತಂಡ ಧಾವಿಸಿ ಪರಿಸ್ಥಿತಿ ಅವಲೋಕಿಸಲು ನಿರ್ಧರಿಸಲಾಗಿದೆ. ಇದು ಪ್ರವಾಹ ಸ್ಥಿತಿ, ರಾಜ್ಯಗಳು ತೆಗೆದುಕೊಂಡ ಪರಿಹಾರದ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ಇದಾದ ನಂತರ ರಾಜ್ಯ ಸರ್ಕಾರಗಳು ವಿಜ್ಞಾಪನಾ ಪತ್ರ ಕೊಟ್ಟ ಮೇಲೆ, ಮತ್ತೂಮ್ಮೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದೆ.
2,034 ಕೋಟಿಗೆ ಮನವಿ ಮಾಡಿದ್ದ ರಾಜ್ಯ: ರಾಜ್ಯದಲ್ಲಿ 2018-19 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 2,034 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 100 ತಾಲೂಕುಗಳು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಬರ ಪರಿಹಾರಕ್ಕಾಗಿ 949 ಕೋಟಿ ರೂ. ಬಿಡುಗಡೆ ಮಾಡಿತ್ತು.
ನಂತರ, ರಾಜ್ಯ ಸರ್ಕಾರ ಹಿಂಗಾರು ಹಂಗಾಮಿನಲ್ಲಿ ಮತ್ತೆ 156 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ, 2034 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಕೇಂದ್ರ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪ್ರವಾಸ ಮಾಡಿ, ಏಪ್ರಿಲ್‌ನಲ್ಲಿಯೇ ವರದಿ ನೀಡಿತ್ತು. ಆದರೆ, ಲೋಕಸಭೆ ಚುನಾವಣೆ ಬಂದು ಕೇಂದ್ರದಲ್ಲಿ ಹೊಸ ಸರ್ಕಾರ ಬಂದಿರುವುದರಿಂದ ಬರ ಪರಿಹಾರ ಘೋಷಣೆ ವಿಳಂಬವಾಗಿದೆ.