Advertisement

ಪರಿಸರದ ಅಭಿವೃದ್ಧಿಗೆ ವಿನಿಯೋಗವಾಗದ 5 ಕೋ.ರೂ.

01:45 AM Dec 21, 2018 | Karthik A |

ಗಂಗೊಳ್ಳಿ: ಕೋಡಿ ಹಾಗೂ ಗಂಗೊಳ್ಳಿಯಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿಗೆ ನೀಡಲಾದ 102 ಕೋ.ರೂ. ಅನುದಾನದಲ್ಲಿ 5 ಕೋ.ರೂ. ಅಲ್ಲಿನ ರಸ್ತೆ, ಪರಿಸರದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎನ್ನುವ ಕರಾರು ಇದ್ದರೂ, ಬ್ರೇಕ್‌ ವಾಟರ್‌ ಕಾಮಗಾರಿ ಮಾತ್ರ ಮುಗಿಸಿ ಕೈತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 
ಬ್ರೇಕ್‌ ವಾಟರ್‌ ಕಾಮಗಾರಿ ಸಲುವಾಗಿ ಟೆಟ್ರಾಫೈಡ್‌ ಸಹಿತ ಭಾರೀ ಗಾತ್ರದ ಸರಕು ವಸ್ತುಗಳನ್ನು ಘನ ವಾಹನಗಳ ಮೂಲಕ ಸಾಗಾಟ ಮಾಡಿದ್ದರಿಂದ ಗಂಗೊಳ್ಳಿ ಪರಿಸರದ ಸುಮಾರು 5 ಕ್ಕೂ ಹೆಚ್ಚಿನ ಒಳ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿ ಹೋಗಿದೆ. ಕೆಲವು ರಸ್ತೆಗಳಲ್ಲಿ ಅಂತೂ ಡಾಮರೇ ಕಿತ್ತು ಹೋಗಿದೆ. ಮತ್ತೆ ಕೆಲವು ರಸ್ತೆಗಳಲ್ಲಿ ಹೊಂಡ – ಗುಂಡಿಗಳಿಂದಾಗಿ ಸಂಚಾರ ಕಷ್ಟಕರವಾಗಿದೆ. 102 ಕೋ.ರೂ. ಬ್ರೇಕ್‌ವಾಟರ್‌ ಕಾಮಗಾರಿಯಲ್ಲಿ ಗುತ್ತಿಗೆದಾರರು 5 ಕೋ.ರೂ. ರಸ್ತೆ, ಪರಿಸರ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಕಾಮಗಾರಿ ಆರಂಭದಲ್ಲೇ ಮಾತುಕತೆಯಾಗಿತ್ತು. ಈಗ ಕಾಮಗಾರಿ ಮುಗಿದಿದೆ. ಆದರೆ ಇಲ್ಲಿನ ರಸ್ತೆ ಅಥವಾ ಪರಿಸರದ ಅಭಿವೃದ್ಧಿ ಸಂಬಂಧ ಈ 5 ಕೋ.ರೂ. ಮಾತ್ರ ಬಳಕೆಯಾದಂತೆ ಕಾಣುತ್ತಿಲ್ಲ.

Advertisement


ಸಚಿವರಿಗೂ ಮನವಿ

ಬ್ರೇಕ್‌ ವಾಟರ್‌ ಕಾಮಗಾರಿಯ ಅನುದಾನದಲ್ಲಿ ಅಲ್ಪ ಹಣವನ್ನು ಇಲ್ಲಿನ ಪರಿಸರದ ಅಭಿವೃದ್ಧಿಗೆ ಬಳಸದ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ ಗಂಗೊಳ್ಳಿ ಬಂದರಿಗೆ ಮೀನುಗಾರಿಕಾ ಸಚಿವರು ಭೇಟಿ ಕೊಟ್ಟ ವೇಳೆ ಅವರಿಗೂ ಈ ಬಗ್ಗೆ ದೂರು ನೀಡಲಾಗಿತ್ತು. ಕೂಡಲೇ ಕ್ರಮ ವಹಿಸಲಾಗುವುದು ಎಂದವರು ಆಗ ಭರವಸೆ ನೀಡಿದ್ದರು. ಅದಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೀನುಗಾರರು, ಗುತ್ತಿಗೆದಾರರ ಜಂಟಿ ಸಭೆಯಲ್ಲಿ ಇಲ್ಲಿನ ಪರಿಸರದ ಅಭಿವೃದ್ಧಿ ಮಾಡಿಕೊಡಲಾಗುವುದು ಟೆಂಡರ್‌ ವಹಿಸಿಕೊಂಡವರು ತಿಳಿಸಿದ್ದರು. 

ಕೂಡಲೇ ಮಾಡಲಿ
ಬ್ರೇಕ್‌ ವಾಟರ್‌ ಸಹಿತ ಇನ್ನಿತರ ಕಾಮಗಾರಿಗಾಗಿ ಸರಕು ವಸ್ತುಗಳನ್ನು ಸಾಗಿಸಲು ಇಲ್ಲಿನ ಒಳ ರಸ್ತೆಗಳನ್ನೇ ಬಳಸಿದ್ದರಿಂದ ರಸ್ತೆಗಳು ಈಗ ಸಂಪೂರ್ಣ ಅಧೋಗತಿಯಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದೇ ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಡಿಸಿ ಜತೆಗಿನ ಸಭೆಯಲ್ಲಿಯೂ 97 ಕೋ.ರೂ. ವೆಚ್ಚದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ಬಾಕಿ ಉಳಿದ 5 ಕೋ.ರೂ. ಹಣವನ್ನು ಇಲ್ಲಿನ ಪರಿಸರ ಸಹಿತ ಇನ್ನಿತರ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದರು. ಇನ್ನಾದರೂ ಅದನ್ನು ಕೂಡಲೇ ಮಾಡಿಕೊಡಲು ಮುಂದಾಗಲಿ. 
– ರಮೇಶ್‌ ಕುಂದರ್‌, ಮೀನುಗಾರ ಮುಖಂಡರು

ಪರಿಶೀಲಿಸಿದ ಬಳಿಕ ನಿರ್ಧಾರ
ಅಂದಾಜು ಪಟ್ಟಿಯಲ್ಲಿ ಏನಿದೆ ಅಂತಾ ನೋಡಿಕೊಂಡು, ಆ ಬಳಿಕ ಏನು ಮಾಡಬೇಕು ಅನ್ನುವುದರ ಕುರಿತು ನಿರ್ಧಾರ ಮಾಡಲಾಗುವುದು. ನಾನು ಹೊಸದಾಗಿ ಬಂದಿರುವುದರಿಂದ ಈ ಬಗ್ಗೆ ತಿಳಿದುಕೊಂಡು ಆ ಬಳಿಕ ಮಾಹಿತಿ ನೀಡುತ್ತೇನೆ. ಸಾಮಾನ್ಯವಾಗಿ ಪರಿಸರದ ಅಭಿವೃದ್ಧಿಗೆ ಬಳಸಬೇಕು ಎನ್ನುವ ನಿಯಮವಿರುತ್ತದೆ. ಆದರೆ ಕೆಲವೊಮ್ಮೆ ಅನುದಾನ ಪೂರ್ತಿ ಬಂದಿಲ್ಲ ಅಂದರೆ ಅದು ಸಾಧ್ಯವಾಗುವುದಿಲ್ಲ. 
– ಉದಯ ಕುಮಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಮೀನುಗಾರಿಕಾ ಮತ್ತು ಬಂದರು ಇಲಾಖೆ

— ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next