Advertisement

101ನೇ ವಸಂತಕ್ಕೆ ಕಾಲಿಟ್ಟ ಪಾಪು

10:35 AM Jan 15, 2020 | Suhan S |

ಹುಬ್ಬಳ್ಳಿ: ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರು 101ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಅವರ ಜನ್ಮದಿನಾಚರಣೆಯನ್ನು ಮಂಗಳವಾರ ಸರಳವಾಗಿ ಆಚರಿಸಿದರು. ಸಾಹಿತಿಗಳು, ಗಣ್ಯರು ನಿವಾಸಕ್ಕೆ ಆಗಮಿಸಿ ಶುಭ ಕೋರಿದರು.

Advertisement

ವಿಶ್ವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಅವರ ಜನ್ಮದಿನ ಆಚರಿಸಲಾಯಿತು. ಪಾಪು ಅವರು ಕೇಕ್‌ ಕತ್ತರಿಸಿ 101ನೇ ಜನ್ಮದಿನ ಆಚರಿಸಿಕೊಂಡರು. ಕುಟುಂಬಸ್ಥರು ಆರತಿ ಬೆಳಗಿ, ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಪಾಪು ಅವರನ್ನು ಸನ್ಮಾನಿಸಿದರು. ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ಗಾಯನದ ಮೂಲಕ ಶುಭಾಶಯ ಕೋರಿದರು. ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಹೋರಾಟದ ಜೀವನ ಒಂದು ಶತಕ ಪೂರೈಸಿದೆ ಎಂಬುದೇ ದೊಡ್ಡ ಸಂತಸದ ವಿಚಾರ.

ಇಡೀ ಬದುಕನ್ನು ಪುಟ್ಟಪ್ಪ ಅವರು ನಾಡು, ನುಡಿ, ಜಲ, ಭಾಷೆಗಾಗಿ ಮೀಸಲಿಟ್ಟಿದ್ದಾರೆ. ವಿಶ್ವದೆಲ್ಲೆಡೆ ಭಾತೃತ್ವ ಮೂಡಬೇಕು, ಲೋಕವೇ ತನ್ನ ಮನೆಯಾಗಬೇಕು ಎನ್ನುವುದನ್ನು ಅಳವಡಿಸಿಕೊಂಡಿರುವ ಪಾಪು ಅವರ ಹೋರಾಟ ಹಾಗೂ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.

ಕವಿಸಂ ಕಾರ್ಯದರ್ಶಿ ಪ್ರಕಾಶ ಉಡಕೇರಿ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರು ಪ್ರತಿಯೊಂದು ಕೆಲಸವನ್ನು ಬದ್ಧತೆಯಿಂದ ನಿರ್ವಹಿಸುತ್ತಾರೆ. ಎಂತಹ ಸಂದಿಗ್ಧ ಪರಿಸ್ಥಿತಿ ಬಂದರೂ ಹೋರಾಟದಿಂದ ಹಿಂದೆ ಸರಿಯದ ಅವರ ದಿಟ್ಟತನ ಪ್ರತಿಯೊಬ್ಬರಿಗೆ ಮಾದರಿ. ಇಂತಹ ಹೋರಾಟಗಾರರ ಬದುಕನ್ನು ಹತ್ತಿರದಿಂದ ನೋಡುತ್ತಿರುವ ನಾವು ಧನ್ಯರು ಎಂದರು.

ಡಾ| ಪಾಟೀಲ ಪುಟ್ಟಪ್ಪ ಅವರ ಸಹೋದರ ಗುರುನಗೌಡ ಪಾಟೀಲ, ಶಿವನಗೌಡ ಪಾಟೀಲ ಶುಭ ಕೋರಿದರು. ವಿವಿಧೆಡೆಯಿಂದ ಕುಟುಂಬದ ಸದಸ್ಯರು ಆಗಮಿಸಿದ್ದರು. ಶಿವಣ್ಣ ಬೆಲ್ಲದ, ಪ್ರಫುಲ್ಲ ನಾಯಕ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ಸದಾನಂದ ಶಿವಳ್ಳಿ, ಶಿವಾನಂದ ಭಾವಿಕಟ್ಟಿ, ಬಸಲಿಂಗಯ್ಯ ಹಿರೇಮಠ, ಸುರೇಶ ಪಾಟೀಲ, ಸಿಬಿಎಲ್‌ ಹೆಗಡೆ, ಸಂಜೀವ ಧುಮ್ಮಕ್ಕನಾಳ, ರವಿ ಕದಂ, ಡಾ| ಬಿ.ಜಿ.ಪಾಟೀಲ, ಎಸ್‌.ಬಿ. ಗಾಮನಗಟ್ಟಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next